ದಾವಣಗೆರೆ: ಹಿಂದುತ್ವ ಪ್ರತಿಪಾದಕ ವೀರ ಸಾವರ್ಕರ್ಗೆ ಭಾರತ ರತ್ನ ನೀಡುವ ವಿಚಾರವಾಗಿ ಟೀಕೆ ಮಾಡಿದ್ದಕ್ಕೆ ಪತ್ರ ಬರೆದು ನನಗೆ ಬೆದರಿಕೆ ಹಾಕಿದ್ದಾರೆ. ಮೇ.28ರೊಳಗೆ ಕ್ಷಮೆ ಕೇಳದಿದ್ದರೇ ಕೊಲೆ ಮಾಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಅ.15 ರಂದು ಸಾವರ್ಕರ್ಗೆ ಮರಣೋತ್ತರ ಭಾರತ ರತ್ನ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ನಾನು ಕೂಡ ವಿರೋಧಿಸಿದ್ದೆ. ಮಾರನೇ ದಿನವೇ ಬೆದರಿಕೆ ಕರೆ ಬಂದಿತ್ತು. ಅದಾದ ನಂತರ ಬೆದರಿಕೆ ಪತ್ರಗಳು ಬರಲಾರಂಭಿಸಿವೆ. ಈ ಹಿಂದೆ ಮೂರು ಪತ್ರ ಬಂದಿದ್ದವು. ಈಗ ಬಂದಿರುವ ಪತ್ರದ ಜೊತೆ ವೀರ ಸಾವರ್ಕರ್ ಪುಸ್ತಕ ಕಳುಹಿಸಿಕೊಡಲಾಗಿದೆ. ಪತ್ರದಲ್ಲಿ ನನ್ನ ಫ್ಯಾಮಿಲಿ ಬಗ್ಗೆ ಬರೆದಿರುವುದನ್ನು ನೋಡಿದರೆ ದಾವಣಗೆರೆಯವರೇ ನನ್ನ ಏಳಿಗೆ ಸಹಿಸದೆ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದರು.
ಈಗಾಗಲೇ ಬೆದರಿಕೆ ಪತ್ರಗಳು ಹಾಗೂ ಕರೆ ಬಂದ ಬಗ್ಗೆ ಪೊಲೀಸರಿಗೆ ದೂರು ಕೊಡಲಾಗಿದೆ. ಈಗಲೂ ನೀಡುತ್ತೇನೆ. ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ನನ್ನ ನಿಲುವಿಗೆ ಬದ್ಧನಿದ್ದೇನೆ. ಇಂತಹ ಗೊಡ್ಡು ಬೆದರಿಕೆಗೆ ಜಗ್ಗುವುದಿಲ್ಲ. ಏನೇ ಇದ್ದರೂ ಮುಂದೆ ಬಂದು ಮಾತನಾಡಬೇಕು. ಅದನ್ನು ಬಿಟ್ಟು ಹಿಂದಿನಿಂದ ನಿಂತು ಹೆದರಿಸಿದರೆ ನಾವು ಹೆದರೋಲ್ಲ. ಈ ಎಲ್ಲ ಪತ್ರಗಳು ಅಂಚೆ ಕಚೇರಿಯಿಂದ ಪೋಸ್ಟ್ ಬಂದಿವೆ. ನನಗೆ ಬಂದಿರುವ ನಾಲ್ಕು ಪತ್ರಗಳಲ್ಲಿನ ಬರಹ ಒಬ್ಬರದ್ದೇ ಆಗಿರುವಂತಿದೆ ಎಂಬ ಸಂಶಯ ವ್ಯಕ್ತಪಡಿಸಿದರು.
ಬೆದರಿಕೆ ಪತ್ರಗಳು, ಕರೆ ಬಂದ ಬಗ್ಗೆ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರಿಗೆ ಪೊಲೀಸರಿಗೆ ನೀಡಿರುವ ದೂರಿನ ಪ್ರತಿ ಕಳುಹಿಸಿಕೊಡುತ್ತೇನೆ. ಈಗಾಗಲೇ ಅನಾಮಧೇಯ ವ್ಯಕ್ತಿಯು ಮೊಬೈಲ್ ಕರೆಯ ಮೂಲಕ ಪದೇ ಪದೆ ಪ್ರಾಣ ಬೆದರಿಕೆ, ಪತ್ರ ಬರೆದು ಕೊಲ್ಲುವುದಾಗಿ ಹೆದರಿಸಿರುವ ಬಗ್ಗೆ ದೂರು ಕೊಟ್ಟಿದ್ದರೂ ಯಾರ ಬಂಧನ ಆಗಿಲ್ಲ. ಬೇಗ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಸಿಎಂ ಯಡಿಯೂರಪ್ಪ ಅವರು ಪೊಲೀಸರಿಗೆ ಸೂಚನೆ ನೀಡಬೇಕು. ಈಗಲಾದರೂ ಪೊಲೀಸ್ ಇಲಾಖೆಯು ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಇಂಥ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.