ದಾವಣಗೆರೆ: ಎಸ್ಟಿ ಮೀಸಲಾತಿಗಾಗಿ ಕೈಗೊಂಡಿರುವ ಹೋರಾಟವನ್ನು ಮನಗಂಡು ಕಾಗಿನೆಲೆ ನಿರಂಜನಾನಂದಪುರಿ ಶ್ರೀಗಳಿಗೆ ಕೇಂದ್ರ ಸರ್ಕಾರ ಶಾಸಕರಾಗಿ, ಸಂಸದರಾಗಿ ಮಾಡುತ್ತದೆ ಎಂಬ ಗಾಳಿ ಮಾತು ಹರಿದಾಡುತ್ತಿತ್ತು. ಈ ಸುದ್ದಿಗೆ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕಾಗಿನೆಲೆ ನಿರಂಜನಾನಂದಪುರಿ ಶ್ರೀಯವರು ಹಾವೇರಿ ಜಿಲ್ಲೆಯ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಸಾಕಷ್ಟು ಹೋರಾಟ ಕೂಡ ಮಾಡುತ್ತಿದ್ದಾರೆ. ಇದನ್ನು ಗಮನಿಸಿರುವ ಕೇಂದ್ರದ ಬಿಜೆಪಿ ನಾಯಕರು, ಅವರ ಹೊರಾಟವನ್ನು ಮನಗಂಡು ಅವರನ್ನು ಶಾಸಕರರಾಗಿ, ಸಂಸದರಾಗಿ ಆಯ್ಕೆ ಮಾಡುವುದಾಗಿ ಕಿವಿ ಮಾತು ಹೇಳಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದ್ದವು. ಇದಕ್ಕೆ ಶ್ರೀಗಳು ತೆರೆ ಎಳೆದಿದ್ದಾರೆ.
ವದಂತಿಗೆ ಫುಲ್ಸ್ಟಾಪ್ ಇಟ್ಟ ಶ್ರೀಗಳು :
ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಕಾಗಿನೆಲೆ ಶ್ರೀಗಳಿಗೆ ಕೇಂದ್ರದ ನಾಯಕರು ಕಿವಿ ಮಾತು ಹೇಳಿದ್ದಾರೆ. ನೀವು ಕರ್ನಾಟಕದಲ್ಲಿ ಹೋರಾಟ ಮುಂದುವರೆಸಿ, ನಾವು ನಿಮ್ಮನ್ನು ಶಾಸಕನಾಗಿ, ಸಂಸದನಾಗಿ ಮಾಡುತ್ತೇವೆ ಎಂದಿದ್ದಾರೆ ಎಂಬೆಲ್ಲ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ನಮ್ಮ ಮಠ ಕಿಂಗ್ ಮೇಕರ್ ಆಗುತ್ತೆ ಹೊರತು ಕಿಂಗ್ ಆಗಲಿಕ್ಕೆ ಯಾವುತ್ತೂ ಇಷ್ಟ ಪಡುವುದಿಲ್ಲ ಎಂದರು.
ಓದಿ: ಸಿದ್ದಗಂಗಾ ಶ್ರೀ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವಾಗಿ ಘೋಷಿಸಿ: ಸಿಎಂಗೆ ವೀರಶೈವ ಮಹಾಸಭಾ ಮನವಿ
ಬಳಿಕ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಶ್ರೀಗಳು ಮಾತನಾಡಿ, ಈ ಯಾತ್ರೆ ಯಾವುದೇ ಸ್ವಾರ್ಥದ ಯಾತ್ರೆ ಅಲ್ಲ. ಈ ಪಾದಯಾತ್ರೆ ವ್ಯಕ್ತಿಯ ವಿರುದ್ಧವೂ ಅಲ್ಲ, ಪಕ್ಷದ ಪರವು ಅಲ್ಲ. ಅನ್ಯಾಯಕ್ಕೆ ಒಳಗಾಗಿರುವ ಕಟ್ಟ ಕಡೆಯ ಕುರುಬನ ನೊಂದ ಮಗವಾಗಿ, ಅವನ ಭವಿಷ್ಯಕ್ಕಾಗಿ ಕುರುಬ ಸಮುದಾಯ ಒಗ್ಗಟ್ಟಾಗಿ ಪಾದಯಾತ್ರೆ ಕೈಗೊಂಡಿದೆ ಎಂದರು.
ಎಸ್ಟಿ ಮೀಸಲು ಪಟ್ಟಿಯಲ್ಲಿ ಕುರುಬ ಸಮುದಾಯವನ್ನು ಸೇರಿಸಬೇಕೆಂದು ಒತ್ತಾಯಿಸಿ ಕೆಳೆದ ಐದಾರು ದಿನಗಳ ಆರಂಭಿಸಿರುವ ಪಾದಯಾತ್ರೆ ಹಾವೇರಿ ಜಿಲ್ಲೆಯ ಕಾಗಿನೆಲೆಯಿಂದ ಆರಂಭ ಆಗಿದ್ದು, ರಾಣೇಬೆನ್ನೂರು, ಹರಿಹರ ಮೂಲಕ ದಾವಣಗೆರೆಗೆ ಬಂದು ತಲುಪಿದ್ದು, ಇಂದು ಚಿತ್ರದುರ್ಗ ಮೂಲಕ ಫೆ.07ಕ್ಕೆ ಬೆಂಗಳೂರಿಗೆ ತಲುಪಲಿದೆ.