ದಾವಣಗೆರೆ : ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದಲ್ಲಿ ನಡೆದಿದೆ.
ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಇಲ್ಲಿ ವಿವಿಧೆಡೆಯಿಂದ ಕೊರೊನಾ ಸೋಂಕಿತರನ್ನು ಕರೆತಂದು ಚಿಕಿತ್ಸೆ ಕೊಡಲಾಗುತ್ತದೆ ಎಂದು ಯಾರೋ ಅಪಪ್ರಚಾರ ಮಾಡಿದ್ದರು. ಇದು ಸ್ಥಳೀಯರಲ್ಲಿ ಆತಂಕ ಮೂಡಿತ್ತು.
ಹೀಗಾಗಿ, ಗ್ರಾಮಸ್ಥರು ಕ್ವಾರಂಟೈನ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ, ಇಲ್ಲಿ ಯಾರಿಗೂ ಚಿಕಿತ್ಸೆ ನೀಡುವುದಿಲ್ಲ. ಕ್ವಾರಂಟೈನ್ ಮಾಡಲು ಮಾತ್ರ ಸಿದ್ಧತೆ ನಡೆಸಿದ್ದರು. ಆದರೆ, ನನಗೆ ನಿಮ್ಮ ಆರೋಗ್ಯ ಮುಖ್ಯ. ಹಾಗಾಗಿ, ಕ್ವಾರಂಟೈನ್ ಮಾಡಲು ಬಿಡುವುದಿಲ್ಲ. ಜನರು ಆತಂಕಗೊಳ್ಳುವುದು ಬೇಡ ಎಂದು ಭರವಸೆ ನೀಡಿ, ಜನರ ಮನವೊಲಿಸಿದರು.