ದಾವಣಗೆರೆ : ಜಯದೇವ ವೃತ್ತದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಮುಷ್ಕರ 15 ದಿನ ಪೂರೈಸಿದೆ.
ಕಳೆದ 16 ತಿಂಗಳ ಶಿಷ್ಯವೇತನ ನೀಡಬೇಕೆಂದು ಪಟ್ಟು ಹಿಡಿದಿರುವ ವೈದ್ಯರು ಹಾಗೂ ವಿದ್ಯಾರ್ಥಿಗಳು ನಿತ್ಯವೂ ವಿಭಿನ್ನ ರೀತಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸುವುದು. ಮಾನವ ಸರಪಳಿ ಸೇರಿ ಬೇರೆ ಬೇರೆ ರೀತಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದ್ದೇವೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆಯೂ ಪ್ರತಿಭಟನೆ ನಡೆಸಿದ್ದೇವೆ. ಆದರೂ ಯಾರು ನಮ್ಮ ಸಂಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ವೈದ್ಯರು, ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈಗಾಗಲೇ ಒಪಿಡಿ ಸೇವೆ ಬಹಿಷ್ಕರಿಸಿರುವ ವೈದ್ಯರು ಹಾಗೂ ವಿದ್ಯಾರ್ಥಿಗಳು, ಆದಷ್ಟು ಬೇಗ ಬೇಡಿಕೆ ಈಡೇರಿಸದಿದ್ರೆ ಕೊರೊನಾ ವಿರುದ್ಧದ ಕರ್ತವ್ಯಕ್ಕೆ ಗೈರಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಂದೆಡೆ ಕಾಲೇಜಿನ ಆಡಳಿತ ಮಂಡಳಿ ಶಿಷ್ಯವೇತನ ನೀಡುವುದಿಲ್ಲ ಎಂದಿದ್ರೆ, ರಾಜ್ಯ ಸರ್ಕಾರವೂ ಇದೇ ಮಾತು ಹೇಳುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಸಿಎಂ ಯಡಿಯೂರಪ್ಪ ಮುಷ್ಕರನಿರತರ ಮನವೊಲಿಸಿ ಧರಣಿ ವಾಪಸ್ ಪಡೆಯುವಂತೆ ಸೂಚನೆ ನೀಡಿದ್ರೂ, ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.