ದಾವಣಗೆರೆ: ಜನಸ್ಪಂದನ ಸಭೆಯಲ್ಲಿ ಕೆಲಸ ಕೊಡಿ, ಇಲ್ಲದಿದ್ದರೆ ಸಾಯುತ್ತೇನೆ ಎಂದ ಮಹಿಳೆ ಮೇಲೆ ಸಿಟ್ಟಾದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಹಿಳೆ ಮೇಲೆ ಎಫ್ಐಆರ್ ದಾಖಲಿಸಿ ಎಂದು ಆದೇಶಿಸಿದ ಘಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನ ಸಭೆ ನಡೆಯುತ್ತಿದ್ದು, ಈ ವೇಳೆ ಮಕ್ಕಳೊಂದಿಗೆ ಬಂದ ಮಹಿಳೆಯೋರ್ವಳು, ಸರ್ ನನಗೆ ಕೆಲಸ ಕೊಡ್ತಾ ಇಲ್ಲ, ಅವರಿಗೆ ಬೇಕಾದವರಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕೂಲಿ ಕೆಲಸ ಕೊಡುತ್ತಾರೆ, ನನಗೆ ಕೆಲಸ ಕೊಡಿಸದಿದ್ದರೆ ಸಾಯುತ್ತೇನೆ ಎಂದು ಹೇಳಿದಳು. ಇದಕ್ಕೆ ಸಿಟ್ಟಾದ ಡಿಸಿ, ಸಾಯುತ್ತೇನೆ ಎಂದು ಹೇಳುವುದು ಅಪರಾಧ, ಎಸ್ಪಿಯವರಿಗೆ ಹೇಳಿ ಈ ಮಹಿಳೆ ಮೇಲೆ ಕೇಸ್ ದಾಖಲಿಸಿ ಎಂದು ಹೇಳಿದರು.
ಈ ಹಿಂದೆ ಕೂಡ ಕೆಲಸ ಕೇಳಿ ಬಂದು ಕೆಲಸ ಕೊಡಿ ಇಲ್ಲವೇ ವಿಷ ಕುಡಿದು ಸಾಯುತ್ತೇನೆ ಎಂದು ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗ್ರಾಮದ ಲಿಂಗರಾಜ್ ಎಂಬಾತನಿಗೆ ಡಿಸಿ ಚಳಿ ಬಿಡಿಸಿ, ಜೀವನದ ಪಾಠ ಹೇಳಿದ್ದರು.
ಜನಸ್ಪಂದನ ಸಭೆಯಲ್ಲಿ ಪದೇ ಪದೆ ಕೆಲಸ ಕೊಡಿ, ಇಲ್ಲವೇ ಸಾಯುತ್ತೇನೆ ಎಂದು ಹೇಳಿ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಈ ಹಿನ್ನೆಲೆ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಕಚೇರಿ, ಜನಸ್ಪಂದನ ಸಭೆ ಕೆಲಸ ಕೊಡುವ ಇಲಾಖೆಯಲ್ಲ ಎಂದು ಹೆಸರು ಹಾಕಿ ಎಂದು ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.