ದಾವಣಗೆರೆ: ಜಿಲ್ಲೆಯ ಅಡಿಕೆ ನಾಡು ಎಂದೇ ಖ್ಯಾತಿ ಪಡೆದ ಚನ್ನಗಿರಿ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮುಖ್ಯಮಂತ್ರಿ ಕೊಟ್ಟ ಕ್ಷೇತ್ರ. ಹಾಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಸೋಲಿಸಿದ ಕ್ಷೇತ್ರ ಕೂಡ ಹೌದು. ಇದೀಗ ಬಿಜೆಪಿಯ ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ವಿರುದ್ಧದ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪದಿಂದ ಚನ್ನಗಿರಿ ಕ್ಷೇತ್ರವು ಮತ್ತೆ ಚರ್ಚೆಯ ಮುನ್ನಲೆಗೆ ಬಂದಿದೆ. ಜೊತೆಗೆ ಕ್ಷೇತ್ರದಲ್ಲಿ ಚುನಾವಣೆ ಕಾವು ಏರುತ್ತಲೇ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.
1994ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ದಿ. ಜೆಹೆಚ್ ಪಟೇಲರು ಗೆಲುವು ಸಾಧಿಸಿದ್ದರು. ನಂತರದಲ್ಲಿ ಅವರು ರಾಜ್ಯದ ಮುಖ್ಯಮಂತ್ರಿ ಆದ ಇತಿಹಾಸ ಇದೆ. ಆದರೆ, 1999ರ ಚುನಾವಣೆಯಲ್ಲಿ ಇದೇ ಮಾಜಿ ಸಿಎಂ ಜೆಹೆಚ್ ಪಟೇಲರನ್ನು ಪಕ್ಷೇತರನಾಗಿ ಸ್ಪರ್ಧಿಸಿದ್ದ ವಡ್ನಾಳ್ ರಾಜಣ್ಣನವರು ಸೋಲಿಸಿದ್ದರು. 2004ರಲ್ಲಿ ಜೆಎಚ್ ಪಟೇಲರ ಮಗ ಮಹಿಮಾ ಪಟೇಲ್ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ವಡ್ನಾಳ್ ರಾಜಣ್ಣ ವಿರುದ್ಧ ಗೆದ್ದಿದ್ದರು. ಈ ಮೂಲಕ ತಂದೆಯ ಸೋಲಿನ ಸೇಡನ್ನು ಮಹಿಮಾ ಪಟೇಲರು ತೀರಿಸಿಕೊಂಡಿದ್ದರು.
ಇದಾದ ಬಳಿಕ ವಡ್ನಾಳ್ ರಾಜಣ್ಣ ಮತ್ತು ಮಾಡಾಳ್ ವಿರೂಪಾಕ್ಷಪ್ಪ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಚನ್ನಗಿರಿ ಸಾಕ್ಷಿಯಾಗಿದೆ. 2008ರಲ್ಲಿ ಬಿಜೆಪಿಯಿಂದ ಮಾಡಾಳು ವಿರೂಪಾಕ್ಷಪ್ಪ ಮತ್ತು ಕಾಂಗ್ರೆಸ್ನಿಂದ ವಡ್ನಾಳ್ ರಾಜಣ್ಣ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ 39,526 ಮತ ಪಡೆದು ವಿರೂಪಾಕ್ಷಪ್ಪ ಗೆಲುವು ಕಂಡಿದ್ದರು. ಕಾಂಗ್ರೆಸ್ನ ವಡ್ನಾಳ್ ರಾಜಣ್ಣ 38,533 ಮತ ಪಡೆದು ಕೇವಲ 993 ಮತಗಳ ಅಂತರದಿಂದ ಸೋಲುಂಡಿದ್ದರು. ಜೆಡಿಯು ಅಭ್ಯರ್ಥಿಯಾಗಿದ್ದಾಗ ಮಹೀಮಾ ಪಟೇಲ್ ಸೋಲು ಕಂಡಿದ್ದರು.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಡ್ನಾಳ್ ರಾಜಣ್ಣ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ರಾಜಣ್ಣ 53,355 ಮತ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಮಾಡಾಳ್ ವಿರೂಪಾಕ್ಷಪ್ಪ 51,582 ಮತ ಪಡೆದು ಪರಭವಗೊಂಡಿದ್ದರು. 2018ರ ಚುನಾವಣೆಯಲ್ಲೂ ವಡ್ನಾಳ್ ರಾಜಣ್ಣ ಮತ್ತು ಮಾಡಾಳ್ ವಿರೂಪಾಕ್ಷಪ್ಪ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆಗ ವಿರೂಪಾಕ್ಷಪ್ಪ 73,794 ಮತ ಪಡೆದು 25,780 ಮತಗಳ ಅಂತರದಿಂದ ಜಯ ದಾಖಲಿಸಿದ್ದರು. ಕಾಂಗ್ರೆಸ್ನ ವಡ್ನಾಳ್ ರಾಜಣ್ಣ 48,014 ಮತ ಪಡೆದು ಸೋತಿದ್ದರು. ಮೂರು ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಹೊದಿಗೆರೆ ರಮೇಶ್ ಸ್ಪರ್ಧಿಸಿದ್ದರು. 2008ರಲ್ಲಿ 21 ಸಾವಿರ, 2013ರಲ್ಲಿ 28 ಸಾವಿರ ಹಾಗೂ 2018ರಲ್ಲಿ 29 ಸಾವಿರ ಮತಗಳನ್ನು ರಮೇಶ್ ಪೈಪೋಟಿ ನೀಡಿದ್ದರು.
ಚನ್ನಗಿರಿ ಕ್ಷೇತ್ರದ ಮತದಾರರು: ಚನ್ನಗಿರಿ ಮತಕ್ಷೇತ್ರದಲ್ಲಿ ಒಟ್ಟು 1,96,229 ಮತದಾರರು ಇದ್ದಾರೆ. ಇದರಲ್ಲಿ 99,199 ಪುರುಷ ಮತದಾರರು ಮತ್ತು 97,021 ಮಹಿಳೆ ಮತದಾರರು ಇದ್ದು, ಇತರ ಮತದಾರರು 09 ಜನರಿದ್ದಾರೆ. ಲಿಂಗಾಯತರು ನಿರ್ಣಾಯಕ ಮತದಾರರಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮುಸ್ಲಿಂ ಮತಗಳು ಕೂಡ ಚುನಾವಣೆಯ ಪರಿಣಾಮ ಬೀರುತ್ತವೆ.
ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ: ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಲೋಕಾಯುಕ್ತ ಕಂಟಕ ಎದುರಾಗಿದೆ. ಇದರಿಂದ ಈ ಬಾರಿ ಮಾಡಾಳ್ ಅವರಿಗೆ ಬಿಜೆಪಿ ಟಿಕೆಟ್ ಕೊಡಲ್ಲ ಎಂಬ ಮಾತುಗಳು ಚನ್ನಗಿರಿ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಹೀಗಾಗಿಯೇ ಬಿಜೆಪಿ ಟಿಕೆಟ್ ಆಕಾಂಕ್ಷಿತರ ಪಟ್ಟಿ ದೊಡ್ಡದಾಗಿದೆ. ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಕೂಡ ಆಕಾಂಕ್ಷಿಯಾಗಿದ್ದು, ಈಗಾಗಲೇ ಒಂದು ಬಾರಿ ಕ್ಷೇತ್ರ ಸುತ್ತಾಟ ನಡೆಸಿದ್ದಾರೆ. ಮತ್ತೊಂದೆಡೆ, ಶಿವಮೊಗ್ಗದ ವೈದ್ಯ ಧನಂಜಯ್ ಸರ್ಜಿ, ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್ ಹೆಚ್ಎಸ್, ಜಿಪಂ ಮಾಜಿ ಅಧ್ಯಕ್ಷೆ ಮಂಜುಳಾ ಟಿವಿ ರಾಜು ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.
ಕಾಂಗ್ರೆಸ್ನಲ್ಲಿ ಒಂಭತ್ತು ಜನರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮಾಜಿ ವಡ್ನಾಳ್ ರಾಜಣ್ಣ, ಜೆಎಚ್ ಪಟೇಲ್ ಮನೆತನದ ತೇಜಸ್ವಿ ಪಟೇಲ್, ಬಸವರಾಜ್ ಶಿವಗಂಗಾ, ಹೊದಿಗೆರೆ ರಮೇಶ್, ವಿಎಂ ಅಶೋಕ್, ಸಂತೇಬೆನ್ನೂರು ಲಿಂಗರಾಜು ಜಿಎಸ್, ಜಗದೀಶ್ ಎಸ್, ಹೆಚ್ಎನ್ ನಿರಂಜನ್, ಪುನೀತ್ ಕುಮಾರ್ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ.
ಕಳೆದ ಮೂರು ಬಾರಿ ಜೆಡಿಎಸ್ನಿಂದ ಸ್ಪರ್ಧೆ ಮಾಡ್ತಿದ್ದ ಹೊದಿಗೆರೆ ರಮೇಶ್ ಈ ಬಾರಿ ಕಾಂಗ್ರೆಸ್ಗೆ ಬಂದಿದ್ದಾರೆ. ಇವರು ಕಾಂಗ್ರೆಸ್ ಸೇರಿದ ಬಳಿಕ ಜೆಡಿಎಸ್ನಿಂದ ಈಗಾಗಲೇ ಯೋಗೇಶ್ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಈಗ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಘೋಷಣೆ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ