ದಾವಣಗೆರೆ: ಮಂಡಿ ವ್ಯಾಪಾರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎಲ್ಲೆಲ್ಲಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ತರಲಾಗುತ್ತದೆ ಎಂಬ ಬಗ್ಗೆ ತೀವ್ರ ನಿಗಾ ವಹಿಸಲಾಗುವುದು. ಈ ಹಿಂದೆ ಈರುಳ್ಳಿ ವ್ಯಾಪಾರಕ್ಕೆ ತೆರಳಿದ್ದವರಿಂದಲೇ ಕೊರೊನಾ ಕಾಲಿಟ್ಟಿತ್ತು ಎಂಬುದು ಗೊತ್ತಾಗಿದೆ. ಹಾಗಾಗಿ ಸರಕು ಲಾರಿಗಳ ಮೇಲೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ರೋಗಿ ಸಂಖ್ಯೆ 976 ಕಳೆದ ಎರಡು ತಿಂಗಳಿನಿಂದ ಬೆಳ್ಳುಳ್ಳಿ ವ್ಯಾಪಾರ ಮಾಡುತ್ತಿದ್ದರು. ಈತ ರೈತಬೀದಿಯ ವಾಸಿಯಾದ ಕಾರಣ ಈ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಅಧಿಕಾರಿಗಳ ಜೊತೆ ಭೇಟಿ ನೀಡಿ ಸರ್ವೇ ಮಾಡಿದ್ದು, ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದರು.
ದಾವಣಗೆರೆಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಹಾರಾಷ್ಟ್ರ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸಮೀಪದ ಕಲ್ಲಹಳ್ಳಿಯಿಂದ ಯಥೇಚ್ಛವಾಗಿ ಬರುತ್ತದೆ ಎಂಬ ಬಗ್ಗೆ ಮಾಹಿತಿ ಇದೆ. ಕೃಷಿಗೆ ಸಂಬಂಧಿತ ತರಕಾರಿ ಸೇರಿದಂತೆ ಇತರೆ ಆಹಾರ ಪದಾರ್ಥಗಳ ಸಾಗಣೆ ಮಾಡುವ ವಾಹನಗಳ ಮೇಲೆ ತೀವ್ರ ನಿಗಾ ವಹಿಸಲಾಗುವುದು ಎಂದು ಹೇಳಿದರು.
ಪೊಲೀಸ್ ಪೇದೆಗೂ ಕೊರೊನಾ ಸೋಂಕು ತಗುಲಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ. ವೈದ್ಯರ ಸಲಹೆ ಪಡೆದುಕೊಂಡು ಪೊಲೀಸ್ ಸಿಬ್ಬಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ವಿತರಿಸಲಾಗುತ್ತಿದೆ. ತ್ರಿಬಲ್ ಲೇಯರ್ ಮಾಸ್ಕ್ಗಳನ್ನು ನೀಡಲಾಗುವುದು. ಯೂನಿಫಾರ್ಮ್, ಶೂಗಳನ್ನು ಹೇಗೆ ಧರಿಸಬೇಕು ಎಂಬ ಬಗ್ಗೆಯೂ ಎಲ್ಲಾ ಸಿಬ್ಬಂದಿಗೆ ಮಾಹಿತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.