ದಾವಣಗೆರೆ: ದಸರಾದ ಪಟ್ಟದ ಗೊಂಬೆಗಳು ಹೆಚ್ಚಾಗಿ ಹಳೇ ಮೈಸೂರು ಭಾಗದಲ್ಲಿ ಕಾಣಸಿಗುತ್ತವೆ. ಈ ಗೊಂಬೆಗಳನ್ನು ವೀಕ್ಷಿಸಲು ದೂರದ ಮೈಸೂರಿಗೆ ಹೋಗಬೇಕೆಂದಿಲ್ಲ. ದಾವಣಗೆರೆಯಲ್ಲೂ ದಸರಾ ಹಿನ್ನೆಲೆಯಲ್ಲಿ ಪಟ್ಟದ ಗೊಂಬೆಗಳನ್ನು ನೋಡಬಹುದು. ವಿನೋಬ ನಗರದಲ್ಲಿ ಮಹಿಳೆಯೊಬ್ಬರು ನಾಲ್ಕೂವರೆ ಸಾವಿರ ಗೊಂಬೆಗಳನ್ನು ಪ್ರತಿಷ್ಠಾಪಿಸಿದ್ದಾರೆ. ಒಂದೊಂದು ಗೊಂಬೆಯೂ ಒಂದೊಂದು ಪೌರಾಣಿಕ ಕಥೆ ಹೇಳುತ್ತಿವೆ.
ಚಂದ್ರಿಕಾ ಎಂಬವರು ತಮ್ಮ ಮನೆಯಲ್ಲಿ ನಾಲ್ಕುವರೆ ಸಾವಿರ ದಸರಾ ಗೊಂಬೆಗಳ ಜೋಡಣೆ ಮಾಡಿದ್ದಾರೆ. ಈ ಗೊಂಬೆಗಳ ಉತ್ಸವ ಕಣ್ತುಂಬಿಕೊಳ್ಳಲು ಜನರು ಚಂದ್ರಿಕಾ ಅವರ ಮನೆಗೆ ಧಾವಿಸಿ ಪಟ್ಟದ ಗೊಂಬೆಗಳನ್ನು ಆನಂದಿಸುತ್ತಿದ್ದಾರೆ. ಆಶ್ವಯುಜ ಮಾಸದ ಪಾಡ್ಯದಿಂದ ದಶಮಿವರೆಗೆ 10 ದಿನ ಗೊಂಬೆ ಕೂರಿಸುವುದು ದಸರಾ ಹಬ್ಬದ ಸಂಪ್ರದಾಯ. ಅಂತೆಯೇ ಚಂದ್ರಿಕಾ ಳೆದ 22 ವರ್ಷಗಳಿಂದ ತಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಿದ್ದಾರೆ. ಪ್ರತಿ ವರ್ಷವೂ ವಿಶಿಷ್ಠವಾಗಿ ಗೊಂಬೆಗಳನ್ನು ಕೂರಿಸುವ ಮೂಲಕ ನಗರದಲ್ಲಿ 'ದಸರಾ ಗೊಂಬೆ ಕೂರಿಸುವ ಚಂದ್ರಿಕಾ' ಎಂದೇ ಪ್ರಸಿದ್ಧಿಯನ್ನೂ ಪಡೆದಿದ್ದಾರೆ.
ಗೊಂಬೆಗಳನ್ನು ಕೂರಿಸಲು ದಸರಾಗೆ ಒಂದು ತಿಂಗಳು ಮುಂಚೆಯೇ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಲಾಗುತ್ತದೆ. ಮಣ್ಣು, ಪೇಪರ್, ಮರ, ಪಿಂಗಾಣಿ, ಹಿತ್ತಾಳೆ, ಕಂಚು, ಹತ್ತಿ, ಬಟ್ಟೆ, ವೈರ್‌ನಿಂದ ತಯಾರಿಸಿದ ಗೊಂಬೆಗಳನ್ನು ವಿಶೇಷವಾಗಿ ಅಲಂಕರಿಸಿ ಕೂರಿಸಲಾಗುತ್ತದೆ. ಗೊಂಬೆಗಳ ಬಣ್ಣ ಮಾಸಿ ಹೋಗಿದ್ದರೆ ಪೇಂಟಿಂಗ್ ಮಾಡಿ ಹೊಸ ರೂಪ ನೀಡುತ್ತಾರೆ. ಕೊನೆಯ ದಿನ ಗೊಂಬೆಗಳನ್ನು ತೊಟ್ಟಿಲಲ್ಲಿ ಮಲಗಿಸಿ, ಪೂಜೆ ಮಾಡಿ ತೆಗೆದಿಡಲಾಗುತ್ತದೆ.
ನಾಲ್ಕೂವರೆ ಸಾವಿರ ಗೊಂಬೆಗಳ ಸಂಗ್ರಹ: ಚಂದ್ರಿಕಾ ಅವರು ಕೊಂಡಪಲ್ಲಿ, ಆಂಧ್ರಪ್ರದೇಶ ಮಧುರೈ ಹೀಗೆ ಸಾಕಷ್ಟು ಕಡೆಯಿಂದ ಗೊಂಬೆಗಳನ್ನು ಖರೀದಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ದೂರದಿಂದ ಗೊಂಬೆಗಳನ್ನು ತರುವ ಇವರು ದಸರಾ ವೇಳೆ ಜೋಡಿಸುತ್ತಾರೆ. ಯಾವುದೇ ಊರಿಗೆ ಹೋದರೂ ಅಲ್ಲಿ ಮೊದಲು ಗೊಂಬೆಗಳನ್ನು ಹುಡುಕಿ ತರುವ ಅಭ್ಯಾಸ ಅವರದ್ದು. ಸದ್ಯ ಧಾರವಾಡದಲ್ಲಿ ನೆಲೆಸಿರುವ ಅವರು ದಾವಣಗೆರೆಯ ವಿನೋಬನಗರದ ನಿವಾಸದಲ್ಲಿ ಗೊಂಬೆಗಳನ್ನು ಜೋಡಿಸಿ ಹಬ್ಬಾಚರಣೆ ಮಾಡುತ್ತಾರೆ.
ಮೊದಲ ಸಾಲಿನಲ್ಲಿ ಗಣೇಶ, ದೇವಿಯರನ್ನು ಕೂರಿಸಲಾಗಿದೆ. ನಂತರದ ಸಾಲಿನಲ್ಲಿ ದೇಶ ಕಾಯುವ ಸೈನಿಕ, ದಶಾವತಾರ, ಕೃಷಿ ಸಲಕರಣೆಗಳು, ಬಕಸೂರ, ಅನಂತ ಪದ್ಮನಾಭ, ರೈತನ ಜೀವನ, ಹಳ್ಳಿ ಬದುಕಿನ ಚಿತ್ರಣ, ಮಹಾಭಾರತ, ರಾಮಾಯಣ ದೃಶ್ಯ ಬಿಂಬಿಸುವ ಬೊಂಬೆಗಳು, ದಸರಾ ಸಂಸ್ಕೃತಿ ಬಿಂಬಿಸುವ ಜಂಬೂ ಸವಾರಿ, ಪಟ್ಟದ ಗೊಂಬೆ, ನಂದಿ, ರಾವಣ, ರಾಮ ಹನುಮಂತ, ಲಕ್ಷ್ಮಣ, ಸೇರಿದಂತೆ ಮಕ್ಕಳಿಗೆ ಇಷ್ಟವಾಗುವ ಗೊಂಬೆಗಳು ಪ್ರದರ್ಶನದಲ್ಲಿವೆ.
ಚಂದ್ರಿಕಾ ಅವರ ಪ್ರತಿಕ್ರಿಯೆ: ಇದು ವಿಶೇಷವಾದ ಹಬ್ಬ. 22 ವರ್ಷಗಳಿಂದ ಗೊಂಬೆಗಳನ್ನು ಕೂರಿಸುತ್ತಾ ಬಂದಿದ್ದೇನೆ. ಹಳೇ ಕಾಲದ ಕಂಚಿನ ಪಾತ್ರೆಗಳು, ಪಟ್ಟದ ಗೊಂಬೆಗಳು, ದಶಾವತಾರ, ಅಷ್ಟಲಕ್ಷ್ಮಿಯರು ಸೇರಿದಂತೆ ಮಕ್ಕಳಿಗೆ ಉಪಯೋಗವಾಗಲೆಂದು ಜಾಣ ಕಾಗೆ, ಆಮೆ ಮತ್ತು ಮೊಲ, ಚರಾಮ ರಾವಣ ಯುದ್ಧ, ಶಿವ-ಪಾರ್ವತಿ, ಗಜೇಂದ್ರ ಮೋಕ್ಷ, ಆದಿಯೋಗಿ ಶಿವ, ಮಕ್ಕಳ ಕಥೆ ಸಾರುವ ಗೊಂಬೆಗಳನ್ನು ಕೊಂಡಪಲ್ಲಿ, ಆಂಧ್ರಪ್ರದೇಶ ಮಧುರೈ, ಎಲ್ಲಾ ಕಡೆಯಿಂದ ಗೊಂಬೆಗಳನ್ನು ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಜಂಬೂ ಸವಾರಿ ಜೋಡಣೆ ಮಾಡಿದ್ದೇನೆ ಎಂದು ಚಂದ್ರಿಕಾ ಹೇಳಿದರು.
ಇದನ್ನೂ ಓದಿ: ಚಾಮರಾಜನಗರ ದಸರಾ ಮಹೋತ್ಸವಕ್ಕೆ ಸಚಿವ ಕೆ.ವೆಂಕಟೇಶ್ ಚಾಲನೆ; 4 ದಿನ ವಿವಿಧ ಕಾರ್ಯಕ್ರಮ