ದಾವಣಗೆರೆ: ಅಡಿಕೆಗೆ ಉತ್ತಮ ಬೆಲೆ ಇರುವುದರಿಂದ ಜಿಲ್ಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ದಾವಣಗೆರೆಯ ರೈತರೊಬ್ಬರು ತಮ್ಮ ತೋಟಕ್ಕೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಒಂದು ವೇಳೆ ಕಳ್ಳರು ತೋಟಕ್ಕೆ ಕಾಲಿಟ್ಟರೆ ಸಿಸಿ ಕ್ಯಾಮರಾದಿಂದ ಮಾಲೀಕನ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ.
ಜಿಲ್ಲೆಯಲ್ಲಿ ಶೇ 50ರಷ್ಟು ರೈತರು ತಮ್ಮ ಜಮೀನಿನಲ್ಲಿ ಅಡಿಕೆ ಕೃಷಿ ಮಾಡುತ್ತಿದ್ದಾರೆ. ಅಡಿಕೆ ತೋಟಗಳಿಗೆ ಕಳ್ಳರು ನುಗ್ಗಿ ಬೆಳೆ ಕಳವು ಮಾಡುತ್ತಿರುವುದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ನಂದೀಶ್ ಎಂಬವರು ತಮ್ಮ ಮೂರುವರೆ ಎಕರೆ ತೋಟಕ್ಕೆ 5 ಮೆಗಾ ಫಿಕ್ಸಲ್‌ನ ಹೆಚ್ಡಿ ಕ್ಯಾಮರಾ ಅಳವಡಿಸಿದ್ದಾರೆ.
ಒಂದು ವೇಳೆ ಕಳ್ಳರು ತೋಟಕ್ಕೆ ನುಗ್ಗಿದರೆ ಸಿಸಿ ಕ್ಯಾಮರಾದಿಂದ ನಂದೀಶ್ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ಈ ಸಿಸಿಟಿವಿ ಅಳವಡಿಸಲು ಸುಮಾರು 30 ಸಾವಿರ ರೂ ವೆಚ್ಚ ಮಾಡಿದ್ದು, ಇದರಿಂದ ಲಕ್ಷಾಂತರ ಮೌಲ್ಯದ ಬೆಳೆ ಉಳಿಯುತ್ತದೆ ಎಂದು ನಂದೀಶ್ ಹೇಳುತ್ತಾರೆ. ಅಲ್ಲದೇ ಇಡೀ ತೋಟದ ಕಾವಲಿಗೆ ಶ್ವಾನವನ್ನೂ ಸಾಕಿದ್ದಾರೆ.
ಈ ಹೆಚ್ಡಿ ಸಿಸಿಟಿವಿ ಕ್ಯಾಮರಾಗಳು ರಾತ್ರಿ ಹೊತ್ತಿನಲ್ಲೂ ಹಗಲು ಹೊತ್ತು ಕಾರ್ಯನಿರ್ವಹಿಸುವಂತೆ ಕೆಲಸ ಮಾಡುತ್ತವೆ. ಈ ಹಿಂದೆ ಎರಡು ಮೂರು ಬಾರಿ ನಂದೀಶ್ ಅವರ ತೋಟದಲ್ಲಿ ಕಳ್ಳತನ ಯತ್ನ ನಡೆದಿದ್ದು, ಸಿಸಿ ಕ್ಯಾಮೆರಾದ ಸಹಾಯದಿಂದ ಕಳ್ಳರನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಹೇಳುತ್ತಾರೆ.
ನಂದೀಶ್ ಸಿಸಿಟಿವಿ ಅಳವಡಿಸಿರುವುದರಿಂದ ಇವರ ತೋಟದ ಸುತ್ತಮುತ್ತಲಿನ ತೋಟಗಳಿಗೂ ಇದರಿಂದ ಉಪಯೋಗವಾಗಿದೆ. ಆಧುನಿಕ ಕಾಲದ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಂಡು ರೈತ ಇತರ ರೈತರಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಮಾದರಿ ರೈತ.. ಹವಾಮಾನ ವೈಪರಿತ್ಯದ ಮಧ್ಯೆಯೂ ಸಮೃದ್ಧ ಅಡಿಕೆ ಬೆಳೆದ ಮಲೆನಾಡಿಗ