ದಾವಣಗೆರೆ: ಈ ಬಾಲಕನಿಗೆ ಇನ್ನು ಮೂರು ವರ್ಷ. ಆದರೆ ಬುದ್ಧಿಶಕ್ತಿ ಮಾತ್ರ ಅಗಾಧ. ಯಾವುದೇ ವಿಷಯದ ಬಗ್ಗೆ ಕೇಳಿದರೂ ಪಟಪಟ ಅಂತಾ ಉತ್ತರ ಕೊಡುವ ಈತನ ಜ್ಞಾನ ಭಂಡಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೂಲತಃ ದಾವಣಗೆರೆಯವರಾಗಿದ್ದು, ಸದ್ಯ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ನಿವಾಸಿಗಳಾಗಿರುವ ದಂತ ವೈದ್ಯರಾದ ಡಾ. ಅಮರ್ ಹಾಗೂ ಡಾ. ಚಂದನ ದಂಪತಿಯ ಪುತ್ರ ನಿನಾದ್ ಗುಪ್ತಾ, ತನ್ನ ಸಾಧನೆ ಮೂಲಕ ಗಮನ ಸೆಳೆದಿದ್ದಾನೆ. ಈ ಪೋರನ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ಏನನ್ನಾದರೂ ಒಮ್ಮೆ ಹೇಳಿಕೊಟ್ಟರೆ ಸಾಕು, ಅದನ್ನು ನೆನಪಿಟ್ಟು ಪಟಪಟನೆ ಹೇಳುತ್ತಾನೆ ನಿನಾದ್. ಬೃಹಸ್ಪತಿ ಹಿಂದೂ ಸಂವತ್ಸರ ಚಕ್ರದ 60 ಸಂವತ್ಸರಗಳನ್ನು ಕೇವಲ 62 ಸೆಕೆಂಡ್‌ಗಳಲ್ಲಿ ಅರಳು ಹುರಿದಂತೆ ಹೇಳುತ್ತಾನೆ. ಮೂರು ವರ್ಷದ ಈ ಬಾಲಕನ ಅದ್ಭುತ ಸ್ಮರಣ ಶಕ್ತಿ ಹೊಂದಿದ್ದು, ಈತ ತನ್ನ ಸಾಧನೆ ಮೂಲಕ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ರ್ಡ್ ಬ್ರೇಕ್ ಮಾಡಿದ್ದಾನೆ.
2021 ರ ಏಪ್ರಿಲ್ 2 ರಂದು ಹರಿಯಾಣ ರಾಜ್ಯದ ಫರಿದಾಬಾದ್‌ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಡೆಸಿದ ಆನ್‌ಲೈನ್ ಕಾರ್ಯಕ್ರಮದಲ್ಲಿ ಆತನ ಸಾಧನೆ ಕಂಡು ಪ್ರಶಸ್ತಿ ಈತನ ಮುಡಿ ಸೇರಿದೆ. ಇದರಿಂದ ಪೋಷಕರು ಮಗನ ಬುದ್ಧಿಶಕ್ತಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಏನ್ ಏನ್ ಹೇಳ್ತಾನೆ ಗೊತ್ತಾ:
ನಿನಾದ್ ಚಿಕ್ಕ ಮಗುವಿದ್ದಾಗಲೇ ಚುರುಕಾಗಿದ್ದನಂತೆ. ಮನೆಯಲ್ಲಿ ಆತನ ಅಜ್ಜಿ ಸಂವತ್ಸರಗಳನ್ನು, ಗಾಯತ್ರಿ ಮಂತ್ರ ಸೇರಿದಂತೆ ಹಲವು ಸ್ತೋತ್ರಗಳನ್ನು ಹೇಳಿಕೊಡುತ್ತಿದ್ದರಂತೆ. ಒಮ್ಮೆ ಹೇಳಿಕೊಟ್ಟಿದ್ದನ್ನು ನೆನಪಿನಲ್ಲಿಟ್ಟುಕೊಂಡು ನಿರರ್ಗಳವಾಗಿ ಹೇಳುತ್ತಿದ್ದ. ಬಾಲಕ ನಿನಾದ್ ಗುಪ್ತಾ ಪ್ರಪಂಚದ 196 ರಾಜಧಾನಿಗಳನ್ನು ಹೇಳಬಲ್ಲ, ಮಗ್ಗಿಗಳನ್ನು ಸಹ ಹೇಳುತ್ತಾನೆ. ಸೌರ ಮಂಡಲದ 30 ಕ್ಕೂ ಹೆಚ್ಚು ಕಾಯಗಳ ಹೆಸರುಗಳನ್ನು ಹೇಳಬಲ್ಲ.
ಗಣಿತ ಬಹಳ ಇಷ್ಟ:
ಈತನಿಗೆ ಸಂಖ್ಯೆಗಳು ಮತ್ತು ಗಣಿತವೆಂದರೆ ತುಂಬಾ ಇಷ್ಟ. ಈಗಲೇ ನಾಲ್ಕನೇ ತರಗತಿ ಪಠ್ಯದ ಸಾಮಾನ್ಯ ಗಣಿತದ ಲೆಕ್ಕಗಳನ್ನು ಬಿಡಿಸುತ್ತಾನೆ. ಟ್ರಿಲಿಯನ್ , ಬಿಲಿಯನ್‌ಗಳ ಸಂಖ್ಯೆಗಳನ್ನು ಗುರುತಿಸುತ್ತಾನೆ. 3000ವರೆಗಿನ ಸಂಖ್ಯೆಗಳನ್ನು ರೋಮನ್ ಸಂಖ್ಯೆಗಳಾಗಿ ಪರಿವರ್ತಿಸಿ ಹೇಳುತ್ತಾನೆ. ಮೂರು ವರ್ಷದ ಮಗನ ಈ ಸಾಧನೆ ಕಂಡು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಗೆ ಕೂಡ ಕಳುಹಿಸಿದ್ದು, ಅಲ್ಲಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲವಂತೆ.
ಒಟ್ಟಾರೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಇಂತಹ ಮಕ್ಕಳಿಗೆ ಒಪ್ಪುತ್ತೆ. ನಿನಾದ್ನ ಅದ್ಭುತ ಜ್ಞಾಪಕ ಶಕ್ತಿ, ಆತನ ಬುದ್ಧಿ ಶಕ್ತಿ ಎಂಥವರನ್ನು ಕೂಡ ನಿಬ್ಬೆರಗಾಗಿಸುತ್ತೆ.