ಹರಿಹರ (ದಾವಣಗೆರೆ): ಮನುಷ್ಯನ ದೇಹದ ಆರೋಗ್ಯ ಸದೃಢವಾಗಿದ್ದಲ್ಲಿ ಮಾತ್ರ ಆತನ ಆಲೋಚನಾ ಶಕ್ತಿಯೂ ಚೆನ್ನಾಗಿರುತ್ತದೆ ಎಂದು ಶಾಸಕ ಎಸ್ ರಾಮಪ್ಪ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು, ತಾಲೂಕು ಶಾಖೆ ಹರಿಹರ ಇವರ ಆಶ್ರಯದಲ್ಲಿ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ರೋಗ ಪತ್ತೆಯಾದರೆ ಅವುಗಳಿಗೆ ಚಿಕಿತ್ಸೆ ಪಡೆಯುವಲ್ಲಿ ನಿರ್ಲಕ್ಷ್ಯ ಮಾಡಬಾರದು.
ಗ್ರಾಮೀಣ ಪ್ರದೇಶದಲ್ಲಿ ಕೆಲಸದ ಒತ್ತಡದಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಹಲವಾರು ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದರು. ಸರ್ಕಾರ ಬಡ ಮತ್ತು ಮಧ್ಯಮ ವರ್ಗದವರಿಗೆ ಹಾಗೂ ರೈತರಿಗಾಗಿ ಹಲವಾರು ಆರೋಗ್ಯ ಯೋಜನೆಗಳನ್ನು ರೂಪಿಸಿದೆ. ಜನರು ಈ ಯೋಜನೆಯಿಂದ ಖಾಸಗಿ ಆಸ್ಪತ್ರೆಗಳಲ್ಲೂ ಸಹ ಸಮರ್ಪಕ ಚಿಕಿತ್ಸೆ ಪಡೆಯಬಹುದು ಎಂದರು. ತಾಲೂಕು ಸರ್ಕಾರಿ ನೌಕರರ ಸಂಘ ಉಚಿತ ಆರೋಗ್ಯ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.