ದಾವಣಗೆರೆ : ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ನೋಟಿಸ್ಗೆ ನಾನು ಉತ್ತರ ಕೊಡಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ನಗರದಲ್ಲಿ ಹಮ್ಮಿಕೊಂಡಿದ್ದ ಸಂಸದ ಜಿಎಂ ಸಿದ್ದೇಶ್ವರ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಶಿಸ್ತು ಸಮಿತಿಯಿಂದ ನೀಡಿರುವ ನೋಟಿಸ್ಗೆ ಯಾವುದೇ ಉತ್ತರ ಕೊಡಲ್ಲ. ನೋಟಿಸ್ಗೆ ನಾನೇಕೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.
ನಾನು ಏನು ಹೇಳಬೇಕೋ ಅದನ್ನೇ ಹೇಳಿದ್ದೇನೆ. ನೋಟಿಸ್ಗೆ ಉತ್ತರ ಕೊಡಲ್ಲ. ಉಚ್ಛಾಟನೆ ಮಾಡಿದರೂ ನನಗೇನೂ ನಷ್ಟ ಇಲ್ಲ. ನನ್ನ ಬಾಯಿಗೆ ಬೀಗ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ನಾನು ಬಿಜೆಪಿ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಾನು ಸಣ್ಣ ಮಗುವಲ್ಲ. ನಾನು ಒಬ್ಬ ಕಾರ್ಯಕರ್ತನಾಗಿ ನನ್ನ ಮತದಾರರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಲು ನನಗೆ ಸ್ವಾತಂತ್ರ್ಯ ಇದೆ. ಹಾಗೆಂದು ನಾನು ಬಿಜೆಪಿ ವಿರುದ್ಧ ಮಾತನಾಡಿಲ್ಲ. ಬಿಜೆಪಿಯನ್ನು ಯಾರು ಕಟ್ಟಿ ಬೆಳೆಸಿದ್ದಾರೋ ಅವರ ವಿರುದ್ಧ ಮಾತನಾಡಿಲ್ಲ ಎಂದು ಹೇಳಿದರು.
ನಾನೇನು ಬಿಜೆಪಿ ಪಕ್ಷ, ಮೋದಿಯವರ ವಿರುದ್ಧ ಮಾತನಾಡಿದ್ದೇನಾ ?. ಬಿಜೆಪಿ ಕಚೇರಿಯಲ್ಲಿ 11 ಜನರಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳುತ್ತಾರೆ. ಹೊರಗೆ ಬಂದು ನನ್ನೊಬ್ಬನಿಗೆ ನೋಟಿಸ್ ಎಂದು ಹೇಳುತ್ತಾರೆ. ನನಗೆ ಮುಕ್ತವಾಗಿ ಮಾತನಾಡುವ ಅವಕಾಶವಿದೆ ಎಂದು ರೇಣುಕಾಚಾರ್ಯ ಹೇಳಿದರು.
ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂಬುದೇ ನನಗೆ ಗೊತ್ತಿಲ್ಲ : ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆಯೇ ಎಂಬುದೇ ನನಗೆ ಗೊತ್ತಿಲ್ಲ. ಶಿಸ್ತು ಸಮಿತಿ ನನ್ನೊಬ್ಬನಿಗೆ ನೋಟಿಸ್ ನೀಡಿ ಬೇರೆಯವರಿಗೆ ಏಕೆ ನೀಡಿಲ್ಲ. ನನ್ನ ಬಾಯಿಯನ್ನು ಯಾರಿಂದಲೂ ಮುಚ್ಚಿಸಲು ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಗುಡುಗಿದರು.
ಕಾಂಗ್ರೆಸ್ ಮುಖಂಡರ ಜೊತೆ ರಾಜಕೀಯ ಹೊರತಾದ ಉತ್ತಮ ಸ್ನೇಹ ಸಂಬಂಧ ಇದೆ. ಶಾಮನೂರು ಶಿವಶಂಕರಪ್ಪನವರ ಜೊತೆಯಲ್ಲಿ ಮೈಸೂರಿಗೆ ಫ್ಲೈಟ್ ನಲ್ಲಿ ಒಂದು ಬಾರಿ ಹೋಗಿದ್ದೇನೆ. ಶಾಮನೂರು ಶಿವಶಂಕರಪ್ಪ ಹಿರಿಯ ಶಾಸಕರು. ಪ್ರೀತಿಯಿಂದ ನನಗೆ ಫ್ಲೈಟ್ ನಲ್ಲಿ ಬರುವಂತೆ ಆಹ್ವಾನ ನೀಡಿದ್ದರು. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಹೋಗಿದ್ದೆ ಎಂದರು. ಸಿದ್ದರಾಮಯ್ಯ, ಡಿಕೆಶಿಯವರಿಗೆ ನಾನು ಫೋನ್ ಮಾಡಿ ಶುಭಾಶಯ ಕೋರಿದ್ದೆ. ನಾನು ಶಾಮನೂರು ಶಿವಶಂಕರಪ್ಪ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದು ತಪ್ಪಲ್ಲ. ಆ ಭೇಟಿ ಸ್ನೇಹಮಯ ಭೇಟಿಯಾಗಿದೆ. ಹಾಗಂತ ನಾನು ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ. ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದು ರೇಣುಕಾಚಾರ್ಯ ಹೇಳಿದರು.
ಬಿಎಸ್ವೈಯನ್ನು ಕಡೆಗಣಿಸಿದರು : ಬಿಜೆಪಿ ಮಹಾನಾಯಕ ಬಿಎಸ್ವೈ ಅವರನ್ನು ಕಡೆಗಣಿಸಿದರು. ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಬಿಎಸ್ವೈ ಇಲ್ಲದೆ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಹೊರಟರು. ಅದಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸಿದರು. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷವನ್ನು ಸದೃಢವಾಗಿ ಕಟ್ಟಲು ಸಮರ್ಥನಿದ್ದೇನೆ. ರಾಜ್ಯ ಸುತ್ತಿ ಮತಗಳಾಗಿ ಪರಿವರ್ತನೆ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಹೇಳಿದರು.