ದಾವಣಗೆರೆ: "ಇಲ್ಲಿಯವರೆಗೂ ನನ್ನನ್ನು ಯಾರೂ ಕೂಡಾ ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಸೇರುವುದಾಗಿ ನಾನು ಎಲ್ಲಿಯೂ ಹೇಳಿಲ್ಲ" ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. ಚನ್ನಗಿರಿ ತಾಲೂಕಿನ ಚನ್ನೇಶಪುರ (ಮಾಡಾಳ್) ಗ್ರಾಮದಲ್ಲಿ ಗುರುವಾರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.
"ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಹೇಳಿ ಮಾಧ್ಯಮಗಳಲ್ಲಿ ನೋಡಿದೆ. ಆ ರೀತಿಯ ಹೇಳಿಕೆಗಳನ್ನು ನಾನು ಕೊಟ್ಟಿಲ್ಲ. ಕೆಲವು ದಿನಗಳ ಹಿಂದೆ ನನ್ನನ್ನು ಭೇಟಿ ಮಾಡಿದ್ದ ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಗುರುಸಿದ್ಧನಗೌಡರ ನನ್ನ ಸ್ನೇಹಿತರು. ಸಹಜವಾಗಿ ಅವರು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಈ ಭೇಟಿಯ ವೇಳೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ. ಅವರ ಭೇಟಿ ದಿನವೇ ನನ್ನ ಮಗ ಮಲ್ಲಿಕಾರ್ಜುನ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ" ಎಂದರು.
"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ. ಸ್ವಾಭಿಮಾನ ಬಳಗ ಒತ್ತಾಯಿಸಿದ್ದರಿಂದ ಮಾಡಾಳ್ ಮಲ್ಲಿಕಾರ್ಜುನ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಚನ್ನಗಿರಿ ಕ್ಷೇತ್ರದ ಜನ ಸುಮಾರು 62 ಸಾವಿರ ಮತ ನೀಡಿದ್ದಾರೆ. ಈಗ ಯಾವುದೇ ಪಕ್ಷಕ್ಕೆ ಹೋಗಲು ಸ್ವಾತಂತ್ರ್ಯ ಇಲ್ಲ. ಏಕೆಂದರೆ ನಮ್ಮನ್ನು ಪಕ್ಷೇತರವಾಗಿ ಸ್ಪರ್ಧೆ ಮಾಡಿಸಿದ್ದ ಆ ಸ್ವಾಭಿಮಾನಿ ಬಳಗದ ಜೊತೆ ಚರ್ಚಿಸಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಸ್ವಯಂಪ್ರೇರಿತರಾಗಿ ನಮ್ಮ ಕುಟುಂಬ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ" ಎಂದು ಹೇಳಿದರು.
"ಇಲ್ಲಿಯವರೆಗೂ ನಮ್ಮನ್ನು ಬಿಜೆಪಿಯಾಗಲೀ, ಕಾಂಗ್ರೆಸ್ ಆಗಲೀ ಯಾರೂ ಸಂಪರ್ಕ ಮಾಡಿಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಮಾಡಾಳ್ ವಿರೂಪಾಕ್ಷಪ್ಪ ಸ್ಪಷ್ಟಪಡಿಸಿದರು.
ಇದನ್ನೂ ಓದಿ: High Court News: ಮಾಡಾಳ್ ವಿರುಪಾಕ್ಷಪ್ಪ ಪ್ರಕರಣ - ಸಿಬಿಐ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ಹೈಕೋರ್ಟ್ ನಿರ್ದೇಶನ
ಭ್ರಷ್ಟಾಚಾರ ಪ್ರಕರಣ: ವಿಧಾನಸಭೆ ಚುನಾವಣೆಗೂ ಮುನ್ನ ಮಾಡಾಳ್ ವಿರೂಪಾಕ್ಷಪ್ಪನವರ ಭ್ರಷ್ಟಾಚಾರ ಆರೋಪ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಈ ಪ್ರಕರಣದಿಂದ ಬಿಜೆಪಿಗೆ ಸಾಕಷ್ಟು ಇರಿಸುಮುರಿಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಚನ್ನಗಿರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿತ್ತು. ಆಗ ಬಿಜೆಪಿ ಅಭ್ಯರ್ಥಿ ಹೆಚ್.ಎಸ್.ಶಿವಕುಮಾರ್ ವಿರುದ್ಧ ಬಂಡಾಯದ ಬೆಂಕಿ ಹೊತ್ತಿಕೊಂಡಿತ್ತು. ಮಾಡಾಳ್ ವಿರೂಪಾಕ್ಷಪ್ಪನವರು ಜೈಲಿನಲ್ಲಿದ್ದರು. ಮಾಡಾಳ್ ಮಲ್ಲಿಕಾರ್ಜುನ್ ಪಕ್ಷದ ವಿರುದ್ಧ ಮಾತನಾಡದೇ ಮೌನವಹಿಸಿದ್ದರು. ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ 62 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದರು. ಆದರೆ ಚುನಾವಣೆಗೆ ಇವರಿಗೆ ಸೋಲಾಗಿತ್ತು.