ದಾವಣಗೆರೆ: ಅವರದ್ದು ಮನೆ ಮನೆಗೆ ಹಾಲು ಹಾಕಿ ಕೃಷಿ ಮಾಡ್ತಾ ಜೀವನ ಕಟ್ಟಿಕೊಂಡಿದ್ದ ಬಡ ಕುಟುಂಬ. ಮುದ್ದಾದ ಮಗಳನ್ನು ಇದ್ದಂತವರ ಮನೆಗೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ, ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡನ ಮನೆಯಲ್ಲಿ ದುರಂತ ನಡೆದು ಹೋಗಿದೆ. ಗರ್ಭಿಣಿಯಾಗಿದ್ದ ಪತ್ನಿಯನ್ನು ಕಿರಾತಕ ಗಂಡ ಉಸಿರುಗಟ್ಟಿಸಿ ಕೊಲೆ ಮಾಡಿ, ದಟ್ಟ ಅರಣ್ಯದ ಹಳ್ಳದಲ್ಲಿ ಹಳ್ಳ ತೋಡಿ ಹೂತು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿಯಲ್ಲಿ ದುರಂತವೊಂದು ನಡೆದಿದೆ. ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೆಶಪ್ಪ ಹಾಗೂ ರತ್ನಮ್ಮ ದಂಪತಿಯ ಮುದ್ದಾದ ಮಗಳು ಚಂದ್ರಕಲಾ ಅಲಿಯಾಸ್ ರಶ್ಮಿ(20) ಅವರನ್ನು ಚನ್ನಗಿರಿ ತಾಲೂಕಿನ ಗಂಗಗೊಂಡನ ಹಳ್ಳಿಯ ಮೋಹನ್ ಕುಮಾರ್ ಅಲಿಯಾಸ್ ಮನು (24) ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.
ತುಂಬು ಗರ್ಭಿಣಿಯಾಗಿದ್ದ ಚಂದ್ರಕಲಾ ಇದ್ದಕ್ಕಿದ್ದಂತೆ ಅಕ್ಟೊಬರ್ 08ಕ್ಕೆ ಕಾಣೆಯಾಗಿದ್ದಾಳೆ. ಇದಕ್ಕೆ ಗಂಡ ಮೋಹನ್ ಕುಮಾರ್ ಪತ್ನಿ ಚಂದ್ರಕಲಾಳ ಪೋಷಕರಿಗೆ ವಿಷಯ ಮುಟ್ಟಿಸಿದ್ದಾನೆ. ಗಂಗಗೊಂಡನಹಳ್ಳಿಗೆ ಧಾವಿಸಿದ ಕುಟುಂಬಸ್ಥರಿಗೆ ನಿಮ್ಮ ಮಗಳು ಓಡಿ ಹೋಗಿದ್ದಾಳೆ ಎಂದು ಕಟ್ಟು ಕಥೆ ಕಟ್ಟಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಚಂದ್ರಕಲಾ ಪೋಷಕರು ಎಲ್ಲ ಕಡೆ ಹುಡುಕಿದರೂ ಸಿಕ್ಕಿದ್ದಿಲ್ಲ. ಪೊಲೀಸರಿಗೆ ದೂರು ನೀಡಲು ಚಂದ್ರಕಲಾ ಕುಟುಂಬಸ್ಥರು ತಿಳಿಸಿದರೂ ಕೂಡ ದೂರು ನೀಡಲು ಹಿಂದೇಟು ಹಾಕಿದ್ದಾನೆ.
ಬಳಿಕ ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಗಂಡ ಮೋಹನ್ ಕಡೆಯಿಂದ ಪೋಷಕರು ಒತ್ತಾಯದ ಮೇರೆಗೆ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಚನ್ನಗಿರಿ ಪೊಲೀಸರು ಚಂದ್ರಕಲಾಗಾಗಿ ಹುಡುಕಿದ್ದಾರೆ. ಸಿಗದ ಕಾರಣ ಮೋಹನ್ನ ವಿಚಾರಣೆ ಮಾಡಿದಾಗ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ದಟ್ಟಾರಣ್ಯದಲ್ಲಿ ದಫನ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪತ್ನಿಯನ್ನು ಕೊಲೆ ಮಾಡಲು ಎರಡು ತಿಂಗಳ ಹಿಂದೆಯೇ ಪ್ಲಾನ್: ದಿನನಿತ್ಯ ಕಿರುಕುಳ ನೀಡ್ತಿದ್ದ ಗಂಡ ಮೋಹನ್ ಕುಮಾರ್ ತನ್ನ ಪತ್ನಿ ಚಂದ್ರಕಲಾಳನ್ನು ಹೇಗೆ ಕೊಲ್ಲಬೇಕು ಎಲ್ಲಿ ಹೂತುಹಾಕಬೇಕೆಂದು ಎರಡು ತಿಂಗಳ ಹಿಂದೆಯೇ ಪ್ಲಾನ್ ಮಾಡಿದ್ದನಂತೆ. ಅಕ್ಟೋಬರ್ 08 ರಂದು ಗಂಗಗೊಂಡನಹಳ್ಳಿ ಗ್ರಾಮದ ನಿವಾಸದಲ್ಲಿ ಗರ್ಭಿಣಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಕೈ ಕಾಲು ಕಟ್ಟಿ ಚೀಲದಲ್ಲಿ ತುಂಬುವ ಮೂಲಕ ತನ್ನ ಕಾರಿನಲ್ಲಿ ಹೆಣ ಸಾಗಿಸಿದ್ದಾನೆ.
ಗರ್ಭಿಣಿ ಮಡದಿ ಎಂಬ ಕರುಣೆಯೇ ಇಲ್ಲದ ಆರೋಪಿ ಮೋಹನ್ ಪತ್ನಿಯ ಹೆಣವನ್ನು ಗಂಗಗೊಂಡನಹಳ್ಳಿ ನಿವಾಸದಿಂದ ಕಾರಿನಲ್ಲಿ 18 ಕಿಮೀ ದೂರ ಕ್ರಮಿಸಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿರಗಲಿಪುರ ಕಣಿವೆಯ ದಟ್ಟ ಅರಣ್ಯದಲ್ಲಿ ಎಳೆದುಕೊಂಡು ಹೋಗಿ ಹಳ್ಳದಲ್ಲಿ ಹಳ್ಳ ತೋಡಿ ದಫನ್ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯ ಮೂಲಕ ತಿಳಿದು ಬಂದಿದೆ.
ಮಾನಸಿಕ ಹಿಂಸೆ ನೀಡ್ತಿದ ಆರೋಪಿ ಮೋಹನ್: ಮೃತ ಚಂದ್ರಕಲಾ ಹಾಗೂ ಆರೋಪಿ ಗಂಡ ಮೋಹನ್ ಕಾರ್ ಏಪ್ರಿಲ್ 13 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮನೆಕಡೆ ಚೆನ್ನಾಗಿದ್ದಾರೆ ಎಂದು ಮದುವೆ ಮಾಡಿಕೊಟ್ಟಿದ್ದರು. ಮದುವೆಯಾಗಿ ಕೇವಲ ಎರಡು ತಿಂಗಳಲ್ಲಿ ಮೃತ ಚಂದ್ರಕಲಾ ಗರ್ಭಿಣಿಯಾಗಿದ್ದಾಳೆ. ಮಾನವೀಯತೆ ಮರೆತ ಗಂಡ ಮೋಹನ್ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಹಾಗೂ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದರಂತೆ.
ಕಿರುಕುಳದ ಬಗ್ಗೆ ಚಂದ್ರಕಲಾ ತನ್ನ ನೋವನ್ನು ತನ್ನ ಅಕ್ಕ ಮೇಘಾನ ಬಳಿ ಹಂಚಿಕೊಂಡಿದ್ದಾಳೆ. ಸಮಾಧಾನ ಮಾಡಿ ಜೀವನ ಮಾಡುವಂತೆ ತಂಗಿಗೆ ಅಕ್ಕ ಮೇಘಾನ ಬುದ್ದಿವಾದ ಹೇಳಿದ್ದಾರೆ. ಆದರೆ ಕಿರಾತಕ ಗಂಡ ಮೋಹನ್ ಕುಮಾರ್ ಚಂದ್ರಕಲಾಳನ್ನು ಇಲ್ಲವಾಗಿಸಿದ್ದಾನೆ. ಇನ್ನು ಪತ್ನಿಯನ್ನು ಕೊಲೆ ಮಾಡಿಲ್ಲ ಎಂದು ಊರು ದೇವರ ವಿಗ್ರಹ ಕೈಯಲ್ಲಿ ಹಿಡಿದು ಅಣೆಪ್ರಮಾಣ ಕೂಡಾ ಮಾಡಿ ಗ್ರಾಮಸ್ಥರನ್ನು ತಾನು ತಪ್ಪಿತಸ್ಥರಲ್ಲ ಎಂದು ಫ್ರೂವ್ ಮಾಡಿದ್ದ ಎಂದು ಮೃತ ಚಂದ್ರಕಲಾ ಸಹೋದರಿ ಮೇಘಾನ ಆಕ್ರೋಶ ವ್ಯಕ್ತಪಡಿಸಿದರು.
ಕೊಲೆ ಮಾಡಿ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದ ಮೋಹನ್: ಮೋಹನ್ ಮೇಲೆ ಅನುಮಾನ ಇದೆ ಎಂದು ಚಂದ್ರಕಲಾ ಕುಟುಂಬಸ್ಥರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಮೋಹನ್ ಕುಮಾರ್ ವಿರುದ್ದ ದೂರು ದಾಖಲಿಸಿದ್ದರು. ಆದರೆ ಚಾಲಕಿ ಗಂಡ ಮೋಹನ್ ಬೇಲ್ ಪಡೆದು ಪ್ರಕರಣದಿಂದ ಹೊರಬಂದಿದ್ದ. ಆದರೆ ಇವನೇ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿ ಮಿಸ್ಸಿಂಗ್ ಆಗಿದ್ದಾಳೆಂದು ದೂರು ನೀಡಿದ್ದ ಪ್ರಕರಣದ ವಿಚಾರಣೆಗೆ ಕರೆಸಿ ಅನುಮಾನವಾದ ಬೆನ್ನಲ್ಲೇ ಪೊಲೀಸರು ಈತನನ್ನು ಬಾಯಿಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನ ಪತ್ನಿಯ ಶವವನ್ನು ಅರಣ್ಯದಲ್ಲಿ ಹೂತು ಹಾಕಿರುವುದಾಗಿ ಮೋಹನ್ ಒಪ್ಪಿಕೊಂಡ ಬಳಿಕ, ಚನ್ನಗಿರಿ ಪೊಲೀಸರು ಸ್ಥಳ ಮಹಾಜಾರ್ ಮಾಡ್ಸಿ ಶವವನ್ನು ಹೊರ ತೆಗೆದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ತಹಶೀಲ್ದಾರ್ ಭೇಟಿ ಪರಿಶೀಲನೆ: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಾಲೂಕು ದಂಡಧಿಕಾರಿ ವಿಶ್ವೇಶ್ವರ ರೆಡ್ಡಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಆರೋಪಿ ಮೋಹನ್ ಕುಮಾರ್ ಕೃತ್ಯವನ್ನು ಒಪ್ಪಿಕೊಂಡಿದ್ದು, ಹಳ್ಳದಲ್ಲಿ ಹೂತು ಹಾಕಲಾಗಿದ್ದು, ಇಡೀ ದೇಹ ಕೊಳೆತು ಹೋಗಿದೆ. ಇನ್ನು ಕಾನೂನು ಪ್ರಕಾರ, ಪೋಸ್ಟ್ ಮಾರ್ಟಂ ಮಾಡಿ ಮೃತ ದೇಹವನ್ನು ಚಂದ್ರಕಲಾ ಕುಟುಂಬಸ್ಥರಿಗೆ ಒಪ್ಪಿಸುತ್ತೇವೆ ಎಂದರು.
ಓದಿ: ಅಡುಗೆ, ಮನೆಗೆಲಸದ ವಿಚಾರಕ್ಕೆ ಕಲಹ.. ಮದುವೆ ವಾರ್ಷಿಕೋತ್ಸವದಂದೇ ಪತ್ನಿ ಕೊಂದ ಪತಿ!