ದಾವಣಗೆರೆ: ರಾಹುಲ್ ಗಾಂಧಿ ಬೈದಿದ್ದು ಬಿಜೆಪಿ ಪಕ್ಷದವರನ್ನು, ಬಿಜೆಪಿಯವರನ್ನು ಬೈದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹೇಗೆ ಹೋಗುತ್ತದೆ? ಮೇಲಾಗಿ ಇವರ ಆಡಳಿತದಿಂದ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಹಾಜರಾಗುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹಾಗೂ ಸಚಿವ ವಿ ಸೋಮಣ್ಣ ಇಬ್ಬರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಬರುವುದರ ಬಗ್ಗೆ ನನಗೆ ಗೊತ್ತಿಲ್ಲ, ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಉತ್ತರಿಸಲ್ಲ ಎಂದರು. ಇನ್ನು ದಿ. ದೃವ ನಾರಾಯಣ ಅವರ ಪುತ್ರನಿಗೆ ಟಿಕೆಟ್ ಕೇಳಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ಸಿದ್ದರಾಮಯ್ಯ ಈ ಬಗ್ಗೆ ನೋಡೋಣ ಎಂದರು. ಕಾಂಗ್ರೆಸ್ ಮೊದಲ ಪಟ್ಟಿ ಇದೇ 17ಕ್ಕೆ ಬಿಡುಗಡೆ ಮಾಡುವ ಸಾದ್ಯತೆ ಇದೆ. ಈಗಿನ ವಾತಾವರಣ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂಬುದನ್ನು ತೋರಿಸುತ್ತಿದೆ ಎಂದರು.
ಮೋದಿ ಬಂದ್ರೆ ರಾಜ್ಯದಲ್ಲಿ ಏನು ಆಗಲ್ಲ: ರಾಜ್ಯಕ್ಕೆ ಮೋದಿ ಬಂದ್ರು ಏನು ಆಗಲ್ಲ. ಕಳೆದ ಸಲ ಕೂಡ ಬಂದಿದ್ದರು. ಇನ್ನು ಮೈಸೂರು ಬೆಂಗಳೂರು ಹೈವೇ ಮಾಡಿದ್ದು ಯಾರು ಎಂಬುದರ ಬಗ್ಗೆ ಬಿಜೆಪಿ ಮನನ ಮಾಡಿಕೊಳ್ಳಬೇಕಿದೆ. ಆಸ್ಕರ್ ಫರ್ನಾಂಡಿಸ್ ಅವರು ಕೇಂದ್ರ ಸಚಿವರಾಗಿದ್ದಾಗ ನಾನು ಮಂಜೂರು ಮಾಡಿಸಿದ್ದು. ಈಗ ಕ್ರೆಡಿಟ್ ತೆಗೆದುಕೊಳ್ಳುತ್ತಿರುವುದು ಬಿಜೆಪಿಯವರು. ಇವರಿಗೆ ಮಾನ ಮಾರ್ಯಾದೆ ಇದೆಯಾ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪನನ್ನ ಬಂಧಿಸಬೇಕಿತ್ತು. ಜೊತೆಗೆ ಪಕ್ಷದಿಂದ ಉಚ್ಛಾಟಣೆ ಮಾಡಬೇಕಿತ್ತು. ಆದನ್ನು ಬಿಜೆಪಿ ಸರ್ಕಾರ ಮಾಡಿಲ್ಲ, ಇವರೇ ಕುಮ್ಮಕ್ಕು ಕೊಡುತ್ತಿದ್ದು, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನನ್ನು ರಕ್ಷಿಸುತ್ತಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರದ ಪರ ಇದ್ದಾರೆ ಎಂದರು.
ಏನು ಅಭಿವೃದ್ಧಿ ಆಗಿದೆ? ಸುಮಲತಾಗೆ ಸಿದ್ದು ಪ್ರಶ್ನೆ: ಮಂಡ್ಯ ಸಂಸದೆ ಸುಮಲತಾ ಹೇಳುವ ಪ್ರಕಾರ ಏನು ಅಭಿವೃದ್ಧಿ ಆಗಿದೆ. ಬೇಕಾದರೆ ಚರ್ಚೆಗೆ ಬರಲಿ. ನಾವು ದಾಖಲೆ ತರುತ್ತೇವೆ. ಯಾರ ಅವಧಿಯಲ್ಲಿ ರಾಜ್ಯ ಹೆದ್ದಾರಿ ಇದ್ದದ್ದು ರಾಷ್ಟ್ರೀಯ ಹೆದ್ದಾರಿ ಆಗಿದ್ದು? ಚರ್ಚೆಗೆ ಬರಲಿ, ಗೊತ್ತಿಲ್ಲ ಅಂದ್ರೆ ಏನು ಮಾಡೋಕೆ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿಗೆ ಅಡಿಗಲ್ಲು ಹಾಕಿದ್ದು ನಾನೇ. ಮೈಸೂರು ಬೆಂಗಳೂರು ಹೆದ್ದಾರಿ ಅಪೂರ್ಣ ಕಾಮಗಾರಿಯನ್ನು ಚುನಾವಣೆ ಕಾರಣಕ್ಕೆ ಉದ್ಘಾಟನೆ ಮಾಡಲಾಗಿದೆ. ಇನ್ನು ಮೈಸೂರು ಸಂಸದ ಪ್ರತಾಪ್ ಸಿಂಹನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೈವೇ ಬರುವುದು ಕೇವಲ ಏಳು ಕಿಲೋಮೀಟರ್, ಮಾತು ಎತ್ತಿದ್ದರೇ ಪ್ರತಾಪ್ ಸಿಂಹ ಪ್ರತಾಪ್ ಸಿಂಹ ಎನ್ನುತ್ತಾರೆ ಅವರಿಗೆ ಹೈವೇ ಬರುವುದು ಏಳು ಕಿಲೋಮೀಟರ್ ಮಾತ್ರ ಎಂದು ಪ್ರತಾಪ್ ಸಿಂಹನಿಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.
ಇದನ್ನೂ ಓದಿ: ಚಾಮುಂಡೇಶ್ವರಿ ಗೆಲ್ಲಲು ಪಣತೊಟ್ಟ ಸಿದ್ದರಾಮಯ್ಯ: ಸ್ಥಳೀಯ ನಾಯಕರೊಂದಿಗೆ ಗೌಪ್ಯ ಸಭೆ