ಹರಿಹರ: ಕೋವಿಡ್ -19 ಸಂದರ್ಭದಲ್ಲಿ ನಮ್ಮ ಪೌರಕಾರ್ಮಿಕರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು ಎಂದು ಪೌರಾಯುಕ್ತೆ ಎಸ್. ಲಕ್ಷ್ಮಿ ಪ್ರಶಂಸೆ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ನಮ್ಮ ಸ್ವಚ್ಛತಾ, ಆರೋಗ್ಯ ಹಾಗೂ ಇಂಜಿನಿಯರಿಂಗ್ ಶಾಖೆಗಳ ಸಿಬ್ಬಂದಿ ಸಲ್ಲಿಸಿದ ಸೇವೆಯನ್ನು ನನ್ನ ಸೇವಾವಧಿಯಲ್ಲಿ ಮರೆಯಲು ಸಾಧ್ಯವಿಲ್ಲ. ಪೌರ ಕಾರ್ಮಿಕ ಸಂಘಗಳ ಹೋರಾಟದ ಫಲವಾಗಿ ಇತ್ತೀಚಿಗೆ ಅವರಿಗೆ ಎಲ್ಲ ಬಗೆಯ ಸರ್ಕಾರಿ ಸೌಲಭ್ಯಗಳು ಸಿಗುತ್ತಿವೆ. ಈಗ ನಗರಸಭೆಯ ಆದಾಯದಲ್ಲಿ ಶೇಕಡಾ 70ರಷ್ಟು ಅನುದಾನವನ್ನು ಸಿಬ್ಬಂದಿ ವೇತನಕ್ಕಾಗಿ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಸದಸ್ಯ ಎಸ್ .ಎಂ ವಸಂತ್ ಮಾತನಾಡಿ, ನಮ್ಮ ನಗರ ಸುಂದರ, ಸ್ವಚ್ಛವಾಗಿರಬೇಕಾದರೆ ಅದಕ್ಕೆ ನಮ್ಮ ಪೌರ ಕಾರ್ಮಿಕರು ನೀಡುವ ಉತ್ತಮ ಸೇವೆಯೇ ಕಾರಣ. ಸುಂದರ ಹಾಗೂ ಸ್ವಚ್ಛತೆಗೆ ಮತ್ತೊಂದು ಹೆಸರೇ ಪೌರ ಕಾರ್ಮಿಕರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಪ್ರಮುಖರು ಪೌರಕಾರ್ಮಿಕರ ಸೇವೆಯ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಅತ್ಯುತ್ತಮ ಸೇವೆ ಸಲ್ಲಿಸಿದ, ನಿವೃತ್ತಿಯ ಅಂಚಿನಲ್ಲಿರುವ ಪೌರಕಾರ್ಮಿಕರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ, ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರುಗಳಾದ ಆರ್.ದಿನೇಶ್ ಬಾಬು, ಪಿ.ಎನ್.ವಿರೂಪಾಕ್ಷ, ದಾದಾ ಖಲಂದರ್, ಉಷಾ ಮಂಜುನಾಥ್, ಜಂಭಣ್ಣ, ಮಹ ಬೂಬ್ ಬಾಷಾ, ಹಿರಿಯ ಆರೋಗ್ಯ ನಿರೀಕ್ಷಕರು ಗಳಾದ ರವಿಪ್ರಕಾಶ್, ಸಂತೋಷ್ ಕುಮಾರ್, ಕೋಡಿ ಭೀಮರಾಯ ಅಲ್ಲದೇ ನಗರಸಭೆಯ ಸಿಬ್ಬಂದಿ ಪೌರಕಾರ್ಮಿಕರು ಉಪಸ್ಥಿತರಿದ್ದರು.