ದಾವಣಗೆರೆ: ಪಿತ್ರಾರ್ಜಿತ ಆಸ್ತಿ ಕೊಡದ ಚಿಕ್ಕಪ್ಪಂದಿರ ವಿರುದ್ಧ ಆಕ್ರೋಶಗೊಂಡ ಮಕ್ಕಳು ತನ್ನ ತಂದೆಯ ಶವವಿಟ್ಟು ಪ್ರತಿಭಟಿಸಿದ ಘಟನೆ ಜಿಲ್ಲೆಯ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮೃತ ಕಲ್ಲಿಂಗಪ್ಪ ಎಂಬುವವರ ಸಹೋದರರಾದ ಶೇಖರಪ್ಪ ಹಾಗೂ ಶಂಕರಪ್ಪ ಎಂಬುವರ ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಈಗ ಮನಸ್ತಾಪ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿ ಕಲ್ಲಿಂಗಪ್ಪ ಅವರ ಶವವಿಟ್ಟು ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದಾರೆ.
ಆಸ್ತಿಯಾಗಿ 28 ಎಕರೆ ಜಮೀನಿದೆ. ಆದರೆ 17 ವರ್ಷದಿಂದಲೂ ಅಣ್ಣನಿಗೆ ದ್ರೋಹ ಮಾಡಿದ ಇಬ್ಬರು ತಮ್ಮಂದಿರು ಆಸ್ತಿಯನ್ನು ಭಾಗ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಶ್ನಿಸಲು ಹೋದರೆ ಹಲ್ಲೆಗೆ ಯತ್ನಿಸುತ್ತಾರೆ. ಈ ಘಟನೆಯಿಂದಲೇ ನೊಂದು ಕಲ್ಲಿಂಗಪ್ಪ ಅವರು ಸಾವನ್ನಪ್ಪಿದ್ದಾರೆ. ಇನ್ನಾದರು ನಮಗೆ ನ್ಯಾಯ ಬೇಕು ಎಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸದ್ಯ ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.