ದಾವಣಗೆರೆ : ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಿನೆದಿನೇ ಹೆಚ್ಚುತ್ತಿವೆ. ವೇಗದ ಮಿತಿ ನಿಗದಿ ಮಾಡಲಾಗಿದ್ದರೂ ಪಾಲಿಸುತ್ತಿರುವವರ ಸಂಖ್ಯೆ ಕಡಿಮೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹೋಗುವ ಸವಾರರಿಗೆ ತಕ್ಕ ಪಾಠ ಕಲಿಸಲು ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಅಳವಡಿಕೆ ಕಾರ್ಯವೂ ವೇಗವಾಗಿ ಸಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಶಾಲಾ ಆವರಣ, ರಸ್ತೆ ತಿರುವು ಸೇರಿ ನಗರ ವ್ಯಾಪ್ತಿಯಲ್ಲಿ ಹಲವೆಡೆ 40 ಕಿ.ಮೀ ವೇಗದಮಿತಿ ನಿಗದಿ ಮಾಡಿದ್ದರೂ ಸವಾರರು ಕ್ಯಾರೇ ಎನ್ನುತ್ತಿಲ್ಲ. ಶೇ.80ರಷ್ಟು ಮಂದಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ.
ಪೊಲೀಸ್ ಇಲಾಖೆಯೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆ ಅದಕ್ಕೆ ಕಡಿವಾಣ ಹಾಕಲು ಇಲಾಖೆ ಚರ್ಚಿಸಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಸಮಗ್ರ 'ಇಂಟಿಗ್ರೇಟೆಡ್ ಟ್ರಾಫಿಕ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಲಾರಿ ಸೇರಿ ಬೃಹತ್ ವಾಹನಗಳ ವೇಗಕ್ಕೆ ಮಿತಿ ಹಾಕಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
ಆಟೋಮೆಟಿಕ್ ಲೈಟ್ಸ್, ಡ್ರೋಣ್ ಕ್ಯಾಮೆರಾ, ಮೈಕ್ ಸಿಸ್ಟಂ ಅಳವಡಿಸಲಾಗುತ್ತಿದೆ. ಇದರಿಂದ ಸಿಗ್ನಲ್ ಜಂಪ್ ಮಾಡುವುದನ್ನು ತಪ್ಪಿಸಬಹುದು. ಸ್ಮಾರ್ಟ್ ಪಾರ್ಕಿಂಗ್, ಸ್ಮಾರ್ಟ್ ಬಸ್ ನಿಲ್ದಾಣದಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.
ಡ್ರೋಣ್ ಕ್ಯಾಮೆರಾ ಮೂಲಕ ದೃಶ್ಯ ಸೆರೆ ಹಿಡಿಯಬಹುದು. ಕಮಾಂಡೆಂಟ್ ಕಂಟ್ರೋಲ್ ಸಿಸ್ಟಂ ಅನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಳವಡಿಸಲಾಗಿದ್ದು, ಶೀಘ್ರದಲ್ಲೇ ಪೊಲೀಸ್ ಇಲಾಖೆಯಲ್ಲೂ ಹಾಕಲಾಗುತ್ತದೆ.
ಸಂಚಾರಿ ನಿಮಯ ಉಲ್ಲಂಘಿಸಿದ್ರೆ ಕ್ಯಾಮೆರಾದಲ್ಲಿ ಸೆರೆಯಾದ ವಾಹನದ ನಂಬರ್ ಪ್ಲೇಟ್ ಪಡೆದು ಮನೆ ಬಾಗಿಲಿಗೆ ದಂಡದ ಚಲನ್ ಕಳುಹಿಸಿ ಕೊಡುವ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.