ದಾವಣಗೆರೆ: ಇಷ್ಟು ದಿನ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ನಿಂದ ನೀರು ಹಾಕಿಸಿ ಇರೋ ಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದರು. ಆದರೆ ದಾವಣಗೆರೆಯಲ್ಲಿ ಕಳೆದ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರೈತರ ಬದುಕು ಮೂರಾಬಟ್ಟೆಯಾಗಿದೆ. ಇಷ್ಟು ದಿನದಿಂದ ಕಾಪಾಡಿಕೊಂಡು ಬಂದಿರುವ ಬೆಳೆ ಕ್ಷಣಾರ್ಧದಲ್ಲಿ ಹಾಳಾಗಿದೆ.
ಹೌದು, ದಾವಣಗೆರೆ ತಾಲೂಕಿನ ಪುಟುಗನಾಳ್, ಬೇತೂರು ಹಾಗೂ ಹಿರೇಮ್ಯಾಗಳಗೆರೆ ಗ್ರಾಮದಲ್ಲಿ ಕಳೆದ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಬೆಳೆಗಳು ಸಂಪೂರ್ಣ ನಾಶವಾಗಿವೆ. ನಿನ್ನೆ ಸಂಜೆ ಸುಮಾರು ಒಂದು ಗಂಟೆಗಿಂತ ಹೆಚ್ಚು ಕಾಲ ಬಿರುಗಾಳಿ ಬೀಸಿದ್ದರಿಂದ ಬಾಳೆ, ಭತ್ತ, ಅಡಿಕೆ ಸೇರಿದಂತೆ ಹಲವು ಬೆಳೆಗಳು ಬಿದ್ದು ನೆಲಸಮವಾಗಿವೆ. ಫಸಲಿಗೆ ಬಂದ ಸಾವಿರಾರು ಅಡಿಕೆ, ತೆಂಗು ಮರಗಳು ನೆಲಸಮವಾಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎನ್ನುತ್ತಾರೆ ರೈತರು.
ಇನ್ನು ಕಳೆದ ರಾತ್ರಿ ಮಳೆಗಿಂತ ಹೆಚ್ಚಾಗಿ ಗಾಳಿಯೇ ಬೀಸಿದೆ. ಮಳೆ ಬಂದಿದ್ದರೆ ಭೂಮಿಯಾದ್ರು ತಂಪಾಗಿರುತ್ತಿತ್ತು. ಆದ್ರೆ ಗಾಳಿಯಿಂದ ಜೀವನದ ಚಕ್ಕಡಿಯೇ ಮುರಿದು ಹೋಗಿದೆ. ಇಷ್ಟು ದಿನ ಹೋರಾಟ ಮಾಡಿ ಭತ್ತ, ಕಬ್ಬು, ಮೆಕ್ಕೆಜೋಳ ಬೆಳೆ ಬೆಳೆದಿದ್ದರು. ಇನ್ನೇನು ಎರಡು ದಿನಗಳಲ್ಲಿ ಕಟಾವ್ ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಬಿರುಗಾಳಿ ಸಮೇತ ಬಂದ ಮಳೆಗೆ ಫಸಲು ಸಂಪೂರ್ಣ ಹಾಳಾಗಿದೆ. ಇದರಿಂದ ವಿಷ ಕುಡಿದು ಸಾಯುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ನೊಂದ ರೈತರು.