ದಾವಣಗೆರೆ : ಮಳೆ ಹೊಡೆತಕ್ಕೆ ಜಿಲ್ಲೆಯ ಗ್ರಾಮೀಣ ಭಾಗದ ಜನರ ಬದುಕು ಅಸ್ತವ್ಯಸ್ತವಾಗಿದೆ. ಕಷ್ಟಪಟ್ಟು ಸಾಲಸೋಲ ಮಾಡಿ ಕೋಳಿ ಫಾರ್ಮ್ ಮಾಡಿದ್ದ ಮಾಲೀಕರಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಮಳೆ ಹೊಡೆತಕ್ಕೆ 8000 ಸಾವಿರ ಕೋಳಿಗಳು ಸಾವನಪ್ಪಿದ್ದು, ಕೋಳಿ ಸಾಕಾಣಿಕೆ ಮಾಡುವ ಮಾಲೀಕರು ತಲೆಯ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಹಾನಿಯಾಗಿದ್ದು, ತೋಟಗಳು ದ್ವೀಪದಂತಾಗಿವೆ.
ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮಹಾಮಳೆಗೆ ಗ್ರಾಮೀಣ ಭಾಗದ ಜನ ಹೈರಾಣಾಗಿದ್ದಾರೆ. ದಾವಣಗೆರೆ ತಾಲೂಕಿನ ಕೆರೆಯಾಗಲಹಳ್ಳಿಯಲ್ಲಿ ಮಹಾಮಳೆಗೆ 8000 ಕೋಳಿಗಳು ಸಾವನಪ್ಪಿವೆ. ಕೆರೆಯಾಗಲಹಳ್ಳಿಯ ಸುತ್ತಮುತ್ತ ಇರುವ ಮೂರ್ನಾಲ್ಕು ಕೆರೆಗಳು ಭಾರಿ ಮಳೆಯಿಂದಾಗಿ ಕೋಡಿ ಬಿದ್ದಿವೆ.
ಫಾರ್ಮ್ಗೆ ನೀರು ನುಗ್ಗಿ 800 ಕೋಳಿ ಸಾವು : ಇನ್ನು ಮಳೆ ಹೆಚ್ಚಾಗಿದ್ದರಿಂದ ಕೋಡಿ ನೀರು ಹರಿದು ರಂಗಪ್ಪನವರ ಕೋಳಿ ಫಾರ್ಮ್ ಗೆ ನುಗ್ಗಿ, 8000 ಕೋಳಿಗಳು ಸಾವನಪ್ಪಿವೆ. ಮಾಲೀಕ ರಂಗಪ್ಪ ಅವರು ಒಬ್ಬರೇ ಕೋಳಿ ಫಾರ್ಮ್ ನಲ್ಲಿದ್ದರಿಂದ ಕೋಳಿಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ, ಇದರಿಂದ ರಂಗಪ್ಪ ಅವರಿಗೆ ಸುಮಾರು 20 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ರಂಗಪ್ಪನವರು ಸತತ ಐವತ್ತು ವರ್ಷಗಳಿಂದ ಕುಕ್ಕುಟೋದ್ಯಮ ನಡೆಸುತ್ತಿದ್ದು, ಈ ಹಿಂದೆ ಯಾವತ್ತೂ ಈ ಪ್ರಮಾಣದಲ್ಲಿ ನಷ್ಟ ಉಂಟಾಗಿಲ್ಲ ಎಂದು ಅವರು ಹೇಳುತ್ತಾರೆ.
ಕಳೆದ ದಿನ ರಾತ್ರಿ 10 ಗಂಟೆ ಸುಮಾರಿಗೆ ಏಕಾಏಕಿ ಮಳೆ ನೀರು ಫಾರ್ಮ್ ಗೆ ನುಗ್ಗಿದ್ದರಿಂದ ಏನೂ ಮಾಡಲಾಗಲಿಲ್ಲ. ಕುಕ್ಕುಟೋದ್ಯಮವನ್ನು ನಂಬಿ ಜೀವನ ಸಾಗಿಸುತ್ತಿರುವ ರಂಗಪ್ಪನವರಿಗೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿರುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಕೊಡಬೇಕೆಂದು ಮಾಲೀಕ ರಂಗಪ್ಪ ಮನವಿ ಮಾಡಿದ್ದಾರೆ.
ರೈತರ ಜಮೀನುಗಳು ಜಲಾವೃತ : ಇನ್ನು ಇದಲ್ಲದೆ ಜಿಲ್ಲೆಯಲ್ಲಿ ಲಕ್ಷಾಂತರ ಎಕರೆ ಜಮೀನು, ಅಡಿಕೆ ತೋಟಗಳು ಜಲಾವೃತವಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಇನ್ನು ಇದಲ್ಲದೆ ಜಿಲ್ಲೆಯ ಹೆಬ್ಬಾಳು, ಮಾಯಕೊಂಡ, ಅಣಜಿ, ಆಲೂರು, ಚನ್ನಗಿರಿ, ಹರಿಹರ, ದಾವಣಗೆರೆ ಜಗಳೂರು ಹೀಗೆ ಸಾಕಷ್ಟು ಕಡೆ ಮಳೆ ಸುರಿದಿದ್ದರಿಂದ ರೈತರು ನಲುಗಿಹೋಗಿದ್ದಾರೆ. ಇನ್ನು ಜಗಳೂರು ದಾವಣಗೆರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗೆ ಅಣಜಿ ಕೆರೆ ಕೋಡಿ ಬಿದ್ದಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಳೆಗೆ ನಲುಗಿದ ಹೆಬ್ಬಾಳು ಗ್ರಾಮದ ಜನ : ಭಾರಿ ಮಳೆಯು ಹೆಬ್ಬಾಳು ಗ್ರಾಮದಲ್ಲಿ ಅವಾಂತರಗಳನ್ನೇ ಸೃಷ್ಟಿ ಮಾಡಿದ್ದು, ಗ್ರಾಮಸ್ಥರು ಇಡೀ ರಾತ್ರಿ ಜಗಾರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಗ್ರಾಮದಲ್ಲಿರುವ ಸರಮಾಲೆ ಶ್ರೀ ರುದ್ರೇಶ್ವರ ಪ್ರೌಢಶಾಲೆಗೆ ಮಳೆ ನೀರು ನುಗ್ಗಿದ್ದರಿಂದ ಇಡೀ ಶಾಲೆ ಸಂಪೂರ್ಣ ಜಲಾವೃತವಾಗಿದೆ. ಇದಲ್ಲದೆ ಶ್ರೀ ರುದ್ರೇಶ್ವರ ಪ್ರಾಥಮಿಕ ಮತ್ತು ನರ್ಸರಿ ಶಾಲೆ ಕೂಡ ಸಂಪೂರ್ಣ ಜಲಾವೃತವಾಗಿದ್ದು, ಸಾಕಷ್ಡು ಮನೆಗಳಿಗೆ ನೀರು ನುಗ್ಗಿದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.
ಜಿಎಂ ಸಿದ್ದೇಶ್ವರ್ ಒಡೆತನದ ಜ್ಯೂಸ್ ತಯಾರಕ ಘಟಕ ಮುಳುಗಡೆ : ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಂಸದ ಜಿಎಂ ಸಿದ್ದೇಶ್ವರ್ ರವರ ಒಡೆತನದ ಜ್ಯೂಸ್ ತಯಾರಕ ಘಟಕ ಜಿಎಂ ಆಗ್ರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಳೆ ನೀರಿನಿಂದ ಮುಳುಗಡೆಯಾಗಿದೆ. ಹೊನ್ನೂರು ಹಾಗೂ ವಡ್ಡಿನಹಳ್ಳಿ ಕೆರೆ ಕೋಡಿಯಿಂದ ಅಪಾರ ಪ್ರಮಾಣ ನೀರು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಹಳ್ಳದ ಪಕ್ಕದಲ್ಲಿರುವ ಜಿಎಂ ಆಗ್ರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿ ಜಲಾವೃತವಾಗಿದೆ. ಈ ಹಿನ್ನಲೆಯಲ್ಲಿ ಸಿಬ್ಬಂದಿಗಳು ಗೇಟ್ ಬಂದ್ ಮಾಡಿದ್ದು, ಸೆಕ್ಯುರಿಟಿ ರೂಂ, ಫಿಲ್ಟರ್ , ಬಾಯ್ಲರ್ ಸೇರಿದಂತೆ ಹಲವು ಮಿಷನ್ ಗಳು ಜಲಾವೃತವಾಗಿವೆ.
ಇದನ್ನೂ ಓದಿ : ಮಳೆ ನೀರಿನಿಂದ ವಿದ್ಯುತ್ ಉತ್ಪಾದನೆ: ತುಳಗೇರಿ ಗ್ರಾಮಸ್ಥರ ವಿನೂತನ ಯೋಜನೆ