ಹರಿಹರ: ನಗರದ ಪಿಬಿ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಿ.ಚಂದ್ರಮೋಹನ್ ನೇತೃತ್ವದಲ್ಲಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಮೋಹನ್, ಬಡವರು ಮತ್ತು ಮಧ್ಯಮ ವರ್ಗದ ಕೂಲಿ ಕಾರ್ಮಿಕರಿಗೆ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೆ ಸರ್ಕಾರ ಇಂದಿರಾ ಕ್ಯಾಂಟೀನ್ ಅನ್ನು ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು ಎಂದು ಸೂಚಿಸಿದರು.
ಅಡುಗೆ ಕೋಣೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿ ಉತ್ತಮ ಗುಣಮಟ್ಟದ ರುಚಿ ರುಚಿಕರವಾದ ಪೌಷ್ಟಿಕಾಂಶದ ಬಿಸಿಬಿಸಿ ಆಹಾರವನ್ನು ಸಾರ್ವಜನಿಕರಿಗೆ ಉಣಬಡಿಸಬೇಕು. ಶುದ್ಧವಾದ ಕುಡಿಯುವ ನೀರು, ಕಾಯಿಸಿದ ಉಗುರು ಬೆಚ್ಚಗಿನ ನೀರನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಸೂಚಿಸಿದರು.
ಪ್ರತಿನಿತ್ಯವೂ ತಾಜಾ ಶುದ್ಧ ತರಕಾರಿಗಳು ಮತ್ತು ಗುಣಮಟ್ಟ ಧಾನ್ಯಗಳನ್ನು, ಆಹಾರ ಸಾಮಗ್ರಿಗಳನ್ನು ತಂದು ಅಡುಗೆ ಮಾಡಬೇಕು. ದಾನದಲ್ಲಿ ಶ್ರೇಷ್ಠ ದಾನ ಅನ್ನದಾನ ಎನ್ನುತ್ತಾರೆ. ಆದ್ದರಿಂದ ಸ್ವಚ್ಛ ಮನಸ್ಸಿನಿಂದ ಬಿಸಿ ಬಿಸಿ ಅಡುಗೆ ತಯಾರಿಸಿ ಹಸಿದವರಿಗೆ ಅನ್ನ ನೀಡಬೇಕು ಎಂದು ಹೇಳಿದರು.
ದಿನೆದಿನೇ ಹರಿಹರ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಹೊಟೇಲ್ ಮಾಲೀಕರು ಸ್ವಚ್ಛತೆ ಕಾಪಾಡಿ ಉತ್ತಮ ಗುಣಮಟ್ಟದ ಆಹಾರವನ್ನು ನೀಡಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಹಾಗೆಯೇ ಸಾರ್ವಜನಿಕರ ಅಂತರ ಕಾಪಾಡಬೇಕು. ಕೊರೊನಾ ಮುಕ್ತಗೊಳಿಸುವುದಕ್ಕೆ ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.