ಹರಿಹರ: ನಿಮ್ಮ ಹೃದಯದಲ್ಲಿ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ನಾಡಿನ ಜನರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.
ನಗರದ ಗಾಂಧಿ ಮೈದಾನದಲ್ಲಿ ನಾಡಿನ ಪರಮಪೂಜ್ಯರ ದಿವ್ಯ ಸಾನ್ನಿಧ್ಯದಲ್ಲಿ ಹೆಚ್.ಶಿವಪ್ಪ ಅಭಿಮಾನಿಗಳ ಸಾಂಸ್ಕೃತಿಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಶರಣರು, ಸಾಧಕರು, ಹುತಾತ್ಮರ ಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭಾವನೆಯನ್ನು ನಾವುಗಳು ಎತ್ತಿ ತೋರಿಸುವ ಅವಶ್ಯಕತೆ ಇಲ್ಲ. ನಮ್ಮ ಅಕ್ಕ ಪಕ್ಕದವರು ಯಾವುದೇ ಸಮಾಜದವರಿರಲಿ ಅವರ ಕಷ್ಟಕ್ಕೆ ಸ್ಪಂದಿಸುವ ಹೃದಯ ನಮ್ಮದಾಗಬೇಕಾಗಿದೆ. ನಮ್ಮ ಜೀವ ಇರುವ ತನಕ ಎಲ್ಲರನ್ನೂ ಹೃದಯ ಪೂರ್ವಕವಾಗಿ ಪ್ರೀತಿಸಬೇಕು ಎಂದು ಸಲಹೆ ನೀಡಿದರು.
ಬಾಲೆಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿ, ದೇಶದಲ್ಲಿ ಬುದ್ದಿ ಜೀವಿಗಳು ಮತ್ತು ಕ್ರಿಯಾಶೀಲರನ್ನು ಅವರಷ್ಟಕ್ಕೆ ಬಿಟ್ಟರೆ ಸಾಕು, ದೇಶ ತಂತಾನೆ ಬದಲಾವಣೆಯನ್ನು ಹೊಂದುತ್ತದೆ. ಜನರಲ್ಲಿ ಇರುವ ಒಂದು ಕೆಟ್ಟ ವಿಚಾರ ಅಂದರೆ ಅಧಿಕಾರ ಇರುವಂತವರನ್ನು ಬೆಂಬಲಿಸುವುದು. ಅದೇ ವ್ಯಕ್ತಿ ಅಧಿಕಾರವನ್ನು ಕಳೆದುಕೊಂಡಾಗ ಅವರನ್ನು ಕೈಬಿಡುವುದು. ಈ ಗುಣವನ್ನು ಭಕ್ತರು ಹಾಗೂ ಅಭಿಮಾನಿಗಳು ಕೈ ಬಿಡಬೇಕು. ಸೋತರು ಗೆದ್ದರು ಅವರ ಜೊತೆ ಸದಾ ಇರುವವನೇ ನಿಜವಾದ ಅಭಿಮಾನಿ ಎಂದು ನುಡಿದರು.
ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾಶರಣರು ಮಾತನಾಡಿ, ಅಪ್ರತಿಮ ಜೀವನ ನಮ್ಮದಾಗಬೇಕಾದರೆ ದಾರ್ಶನಿಕರ ಪ್ರೇರಣೆ ಬೇಕು. ಅಸಮಾನತೆ ಇಲ್ಲದೆ, ಅನ್ಯಾಯ ಇಲ್ಲದೆ ಇರುವಂತಹ ಸಮಾಜವನ್ನು ಸಂತರು ನಿರ್ಮಾಣ ಮಾಡಬೇಕು. ಆರೋಗ್ಯ ಪೂರ್ಣವಾದ ಸಮಾಜವನ್ನು ಕಟ್ಟುವುದು ಅಷ್ಟು ಸುಲಭವಲ್ಲ. ನರಕ ವಾತಾವರಣ ನಿರ್ಮಾಣವಾಗಿದೆ ಎಂದರೆ ಆ ಕಾರಣಕ್ಕೆ ನಾವೇ ಹೊಣೆಗಾರರಾಗಿದ್ದೇವೆ. ಜನರೊಡನೆ ಪ್ರೀತಿ ವಿಶ್ವಾಸದಿಂದ ನಡೆದಾಗ ಮಾತ್ರ ನಮ್ಮ ಅಭಿವೃದ್ಧಿಯಾದಂತೆ ಎಂದರು.
ಈ ವೇಳೆ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ್ ಹೊರಹಟ್ಟಿ, ಬೋಜೆಗೌಡ, ಚೌಡಾರೆಡ್ಡಿ ತೂಪಲ್ಲಿ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.