ಹರಿಹರ(ದಾವಣಗೆರೆ): ಪ್ರಸ್ತುತ ತಾಂತ್ರಿಕ ಯುಗದಲ್ಲಿ ದೇಶದ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಡಿ. ರವಿಕುಮಾರ್ ಎಚ್ಚರಿಸಿದ್ರು.
ನಗರದ ಗಿರಿಯಮ್ಮ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ಹರಿಹರ ಗ್ರಾಮಾಂತರ ಠಾಣೆಯ ವತಿಯಿಂದ ಹಮ್ಮಿಕೊಂಡಿದ್ದ 'ಅಪರಾಧ ತಡೆ ಮಾಸಾಚರಣೆ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಸಮಯದಲ್ಲಿ ಮೊಬೈಲ್ ಬಳಕೆ ತ್ಯಜಿಸಿ, ತಮ್ಮ ಜೀವನದ ಗುರಿ ಮುಟ್ಟುವ ಕಡೆ ಗಮನ ಹರಿಸಿದರೆ, ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬಹುದು. ಜೊತೆಗೆ ತಾವು ಓದಿದ ಸಂಸ್ಥೆ ಹಾಗೂ ತಂದೆ ತಾಯಂದಿರಿಗೂ ಒಳ್ಳೆಯ ಹೆಸರು ತರಬಹುದು ಎಂದು ಸಲಹೆ ಕೊಟ್ಟರು.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೀಲರಾಜು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸೈಬರ್ ಕ್ರೈಮ್ ಹೆಚ್ಚಾಗುತ್ತಿದೆ. ಇದರಿಂದ ನಾವು ಸುರಕ್ಷಿತವಾಗಿರಬೇಕು. ಇಂದು ಎಲ್ಲಾ ವಿದ್ಯಾರ್ಥಿಗಳ ಕೈಯಲ್ಲಿ ಸ್ಮಾರ್ಟ್ ಮೊಬೈಲ್ ಫೋನ್‌ಗಳಿವೆ. ಇವುಗಳಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗುತ್ತಿದೆ. ವಿದ್ಯಾರ್ಥಿನಿಯರು ಇದರಿಂದ ದೂರ ಉಳಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ಪಿ.ಎಸ್.ಐ ಮಹಮದ್ ಇಸಾಕ್ ಮಾತನಾಡಿ, ಯುವ ಸಮೂಹ ಮಾದಕ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಅಂತವರನ್ನು ಕಂಡ ತಕ್ಷಣ ಮಾನಸಿಕ ವೈದ್ಯರ ಬಳಿ ಚಿಕೆತ್ಸೆ ಕೊಡಿಸಿದಾಗ ಹಂತ ಹಂತವಾಗಿ ವ್ಯಸನ ಮುಕ್ತರನ್ನಾಗಿ ಮಾಡಲು ಸಹಾಯವಾಗುತ್ತದೆ. ಇಂತವರು ನಿಮಗೆಲ್ಲಾದರೂ ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ರು.
ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಮಾತನಾಡಿ, ಸಮಾಜದಲ್ಲಿ ಕಾಮುಕರ ಹಟ್ಟಹಾಸ ಹೆಚ್ಚಾಗಿದ್ದು ಪೋಲಿಸರು ಅವರನ್ನು ಮಟ್ಟ ಹಾಕುತ್ತಿದ್ದಾರೆ. ಇತ್ತೀಚಿಗೆ ಹೈದರಾಬಾದ್‌ನಲ್ಲಿ ನಡೆದಿರುವ ಎನ್‌ಕೌಂಟರ್ ಇದಕ್ಕೆ ಸಾಕ್ಷಿ. ಸಮಾಜವು ಪೊಲೀಸರಿಗೆ ಬಲ ನೀಡಬೇಕಾಗಿರುವುದು ಅವಶ್ಯಕ ಎಂದರು.
ಇದೇ ವೇಳೆ, ಕಾರ್ಯಕ್ರದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ವಿಡಿಯೋ ತೋರಿಸಲಾಯ್ತು.
ಪದವಿ ಕಾಲೇಜಿನ ಪಾಂಶುಪಾಲರಾದ ಎಸ್.ಎಚ್. ಪ್ಯಾಟಿ, ಸಂಸ್ಥೆಯ ಅಧ್ಯಕ್ಷ ತಿಪ್ಪೇಸ್ವಾಮಿ, ಎ.ಎಸ್.ಐ ರಾಜಶೇಖರ್, ಪೊಲೀಸ್ ಸಿಬ್ಬಂದಿಗಳಾದ ದೇವರಾಜ್, ಪ್ರಕಾಶ್, ಶಿವಪದ್ಮ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಜರಿದ್ದರು.