ಹರಿಹರ (ದಾವಣಗೆರೆ): ಸುಪ್ರೀಂ ಕೋರ್ಟ್‌ನ ಆದೇಶದಂತೆ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶವನ್ನು ಪ್ರಕಟಿಸುವಂತಿಲ್ಲ ಎಂದು ಉಪ ವಿಭಾಗಧಿಕಾರಿ ಮಮತಾ ಹೊಸಗೌಡರ್ ಹೇಳಿದರು.
ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಹಾಗೂ ಸರ್ಕಾರದ ಆದೇಶದಂತೆ ಗುರುವಾರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆಯನ್ನು ನಿಗದಿ ಮಾಡಲಾಗಿತ್ತು. ಅದರಂತೆ ನಗರಸಭೆಯ ಸಭಾಂಗಣದಲ್ಲಿ ಬೆಳಗ್ಗೆ 11.00ಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಜೆಡಿಎಸ್ ಪಕ್ಷದಿಂದ ಮಹಿಳಾ ಸದಸ್ಯೆ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾಂಗ್ರೇಸ್ ಪಕ್ಷದಿಂದ ಪುರುಷ ಸದಸ್ಯ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆಯನ್ನು ಸಲ್ಲಿಸಿದರು. ನಾಮಪತ್ರದ ಪರೀಶಿಲನೆ ಮಾಡಿದ್ದು ಎಲ್ಲಾ ಅಂಶಗಳು ಕ್ರಮಬದ್ದವಾಗಿವೆ. ಒಂದಕ್ಕಿಂತ ಹೆಚ್ಚಿನ ಸದಸ್ಯರು ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣೆಯನ್ನು ನಡೆಸುವ ಪ್ರಶ್ನೆ ಉದ್ಭವಿಸುವುದಿಲ್ಲ.
ಜೆಡಿಎಸ್-13, ಕಾಂಗ್ರೆಸ್-10 ಹಾಗೂ ಪಕ್ಷೇತರ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಬಿಜೆಪಿಯ 5 ಜನ ಸದಸ್ಯರು, ಶಾಸಕರು, ಸಂಸದರು ಗೈರು ಹಾಜರಾಗಿದ್ದರು.
ನ್ಯಾಯಾಲಯದ ಆದೇಶದಂತೆ ಮತ ಎಣಿಕೆಯವರೆಗೆ ಮಾತ್ರ ಆದೇಶ ಮಾಡಿದ್ದು, ಅದರಂತೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ, ಅವರ ಆದೇಶದಂತೆ ನಡೆಯಲಾಗುವುದು. ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ಒಂದು ತಿಂಗಳೊಳಗೆ ಪ್ರಕರಣವನ್ನು ಇತ್ಯರ್ಥ ಮಾಡುವಂತೆ ಆದೇಶ ಮಾಡಿದ್ದು ಅಲ್ಲಿಯವರೆಗೂ ಕಾಯುವುದು ಅನಿವಾರ್ಯ ಎಂದರು.