ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ಆರೋಗ್ಯ ಮಾತೆಯ ಬೆಸಿಲಿಕಾ ಚರ್ಚ್ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸರ್ವಧರ್ಮಗಳ ಸಾಮರಸ್ಯ ಸಾರುವ ಎಲ್ಲಾ ಧರ್ಮೀಯರ ಆರಾಧ್ಯ ಕೇಂದ್ರವಾಗಿದೆ. ಕರ್ನಾಟಕದ ಮಧ್ಯಭಾಗದಲ್ಲಿರುವ ಹರಿಹರದಲ್ಲಿ ಆರೋಗ್ಯ ಮಾತೆಯ ಬೆಸಿಲಿಕಾ ಪುಣ್ಯಕ್ಷೇತ್ರವಿದೆ. ಏಸುವಿನ ತಾಯಿ ಮರಿಯಮ್ಮ ದರ್ಶನ ನೀಡಿದ ಕರ್ನಾಟಕದ ಏಕೈಕ ಪುಣ್ಯಭೂಮಿ ಎಂಬ ಪ್ರಖ್ಯಾತಿ ಹೊಂದಿದೆ. ಸತ್ಯಮ್ಮ ಎಂದು ಪ್ರಖ್ಯಾತಳಾಗಿ ದರ್ಶನ ನೀಡಿದ ಮೇರಿ ಮಾತೆಯ ಸ್ಮರಿಸಿ ಬಲಿ ಪೂಜೆ ನೆರವೇರಿಸುವುದು ಇಲ್ಲಿನ ವಿಶೇಷ.
ಬೆಸಿಲಿಕ ಎಂಬ ವಿಶ್ವಮಾನ್ಯತೆ ಸಿಗುವುದು ಅಷ್ಟು ಸುಲಭವಲ್ಲ. ಅಂದ ಹಾಗೆ ಈ ಶ್ರೇಷ್ಠ ಸ್ಥಾನ ನೀಡುವುದು ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್. ಕಳೆದ ವರ್ಷ ಈ ಪುಣ್ಯತಾಣಕ್ಕೆ 2019ರ ಸೆಪ್ಟಂಬರ್ 18 ರಂದು ಬೆಸಿಲಿಕಾ ಎಂಬ ಅಧಿಕೃತ ಮನ್ನಣೆ ಸಿಕ್ಕಿದೆ. ಸಾಮಾನ್ಯವಾಗಿ ಜನರು ನಂಬಿಕೆ, ಪಾಪ ಪರಿಹಾರ ಭಾವನೆ, ಅದ್ಭುತಗಳು ನಡೆಯುವ ತಾಣ ಎಂದು ಪರಿಗಣಿಸಿ ವಿಶ್ವಗುರು ಅವರೇ ಈ ಮಾನ್ಯತೆ ನೀಡಿದ ಬಳಿಕ ಈ ಬೆಸಿಲಿಕಾ ಮತ್ತಷ್ಟು ಪ್ರಖ್ಯಾತಿ ಹೊಂದಿದೆ.
ಆರೋಗ್ಯ ಮಾತೆ ಚರ್ಚ್ನ ಇತಿಹಾಸ ಏನು...?
1,800ರ ಆದಿಯಿಂದಲೂ ಹರಿಹರದಲ್ಲಿ ಈ ಚರ್ಚ್ ಇದೆ. ಬ್ರಾಹ್ಮಣನೊಬ್ಬನು ಸ್ನಾನ ಮಾಡುವಾಗ ಆಕಸ್ಮಿಕವಾಗಿ ತುಂಗಭದ್ರಾ ನದಿಗೆ ಬಿದ್ದು, ಸಾವಿನ ಭೀತಿಯಲ್ಲಿದ್ದರು. ಆಗ ಲೇಡಿ ಆಫ್ ಹೆಲ್ತ್‌ನ ತೇಲುವ ಪ್ರತಿಮೆ ನೋಡಿದರು. ಅದನ್ನು ಹಿಡಿದಿಟ್ಟುಕೊಂಡ ನಂತರ ಜೀವ ಉಳಿಯಿತು. ಮನೆಗೆ ತಲುಪಿದ ನಂತರ ಅವರ ಹೆಂಡತಿ ಮತ್ತು ಮಕ್ಕಳು ಲೇಡಿ ಆಫ್ ಹೆಲ್ತ್‌ನ ಪ್ರತಿಮೆಯನ್ನು ಸ್ಪರ್ಶಿಸಿದಾಗ ಕ್ಷಯ ಮತ್ತು ಪಾರ್ಶ್ವವಾಯು ಸೇರಿದಂತೆ ಇತರೆ ರೋಗಗಳಿಂದ ಗುಣಮುಖರಾದರು. ಬಳಿಕ ತಾಯಿಯ ಸೇವೆಯಲ್ಲಿ ನಿರತರಾದರು. ಬ್ರಾಹ್ಮಣ ನಿಧನರಾದ ಬಳಿಕ ಅವರ ಸಮಾಧಿ ಮಾಡಲಾಯಿತು. ಬಳಿಕ ಅದೇ ಮನೆಯನ್ನು ತುಂಗಭದ್ರಾ ನದಿಯ ದಡದಲ್ಲಿ ಚರ್ಚ್ ಆಗಿ ಪರಿವರ್ತಿಸಲಾಯಿತು ಎಂಬ ಇತಿಹಾಸ ಇದೆ.
ಮುಂಚಿನ ಮೈಸೂರು ರಾಜಮನೆತನ, ನಂತರ ಬ್ರಿಟಿಷರು ಈ ತಾಣ ಅಭಿವೃದ್ಧಿಗೆ ಮುಂದಾದರು. 1833 ರಲ್ಲಿ ಫ್ರಾ. ಬಿಗೋಟ್ ಅವರು ಹರಿಹರದಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿದರು ಎಂಬುದಕ್ಕೆ ಪುರಾವೆಗಳಿವೆ. ಬಳಿಕ ಈ ತಾಣ ಜನರ ಕಷ್ಟ ಪರಿಹರಿಸುವ ಸತ್ಯಮ್ಮ ತಾಯಿ ಮೇರಿ ಮಾತೆ ಅಂತಾನೇ ಫೇಮಸ್ ಆಯ್ತು.
ತಾಯಿ ಮನೆಗೆ ಮಗು ಹೋಗುವ ರೀತಿಯಲ್ಲಿ ಆರೋಗ್ಯ ಮಾತೆಯ ಬೆಸಿಲಿಕಾ ಪುಣ್ಯಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಮಾಡುವ ಜನರ ಎಲ್ಲಾ ಬೇಡಿಕೆಗಳು ಈಡೇರಿವೆ. ಅನೇಕ ಪವಾಡಗಳು ನಡೆದಿವೆ ಎಂಬ ನಂಬಿಕೆ ಈಗಲೂ ಚಾಲ್ತಿಯಲ್ಲಿದೆ. ಈ ದೇಗುಲ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಸರ್ವಧರ್ಮೀಯರು ಬಂದು ಹರಕೆ ಹೊತ್ತುಕೊಂಡು ಸಮಸ್ಯೆ ಪರಿಹರಿಸಿಕೊಂಡಿದ್ದಾರೆ. ಈ ಚರ್ಚ್ ಅನ್ನು ಪಗೋಳ ವಾಸ್ತು ಶಿಲ್ಪ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಬೆಸಿಲಿಕಾ ಎಂದರೇನು?
ಬೆಸಿಲಿಕಾ ಅಂದ್ರೆ ಮಹಾದೇಗುಲ ಎಂದರ್ಥ. ಮಹಾ ದೇವಾಲಯಗಳಲ್ಲಿ ಎರಡು ವಿಧ. ಹಿರಿ ಮಹಾದೇವಾಲಯಗಳು ಮತ್ತು ಕಿರು ಮಹಾ ದೇವಾಲಯಗಳು. ವಿಶ್ವದ ನಾಲ್ಕೂ ಹಿರಿ ದೇವಾಲಯಗಳು ರೋಮ್ ನಗರದಲ್ಲಿವೆ. ಅವು ಸೈಂಟ್ ಪೀಟರ್, ಸೈಂಟ್ ಜಾನ್ ಲಾತೆರಾನ್, ಸೈಂಟ್ ಪಾಲ್ ಮತ್ತು ಸೈಂಟ್ ಮೇರಿ ಮೇಜರ್. ಇವೆಲ್ಲವೂ ಒಂದರಿಂದ ಇನ್ನೊಂದು ಕೆಲವೇ ಮೈಲುಗಳ ಅಂತರದಲ್ಲಿವೆ. ವಿಶ್ವದ ಅತ್ಯಂತ ಕಿರಿದಾದ ರಾಷ್ಟ್ರ ವ್ಯಾಟಿಕನ್ನಲ್ಲಿ ಸೈಂಟ್ ಪೀಟರ್ ಬೆಸಿಲಿಕಾದ ಆವರಣದಲ್ಲಿಯೇ ಪೋಪ್ ಅವರ ನಿವಾಸ ಮತ್ತು ವಿವಿಧ ಕಚೇರಿಗಳಿವೆ.
ಕಿರಿಯ ಬೆಸಿಲಿಕಾ ಎಂಬ ಅಭಿದಾನವನ್ನು ವಿಶ್ವದಾದ್ಯಂತ ಆಯ್ದ ಕೆಲವು ಕ್ಯಾಥೋಲಿಕ್ ದೇವಾಲಯಗಳಿಗೆ ಕ್ಯಾಥೋಲಿಕ್ ಧರ್ಮಸಭೆಯ ನಿಯಮಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ಒಂದು ದೇವಾಲಯವು ಬೆಸಿಲಿಕವಾಗಿ ಘೋಷಣೆಯಾಗಿ ಅದರ ಸಮರ್ಪಣೆಯಾದ ನಂತರ ಬೆಸಿಲಿಕಾದ ಧ್ವಜ ಮತ್ತು ಮೊಹರಿನ ಮೇಲೆ ಪೋಪ್ ಜಗದ್ಗುರುಗಳ ಲಾಂಛನವಾದ ಅಡ್ಡ ಕೀಲಿ ಕೈಯನ್ನು ಬಳಸುವ ಹಕ್ಕು ಈ ಬೆಸಿಲಿಕಕ್ಕೆ ಲಭ್ಯವಾಗುತ್ತದೆ. ಕಿರಿಯ ಬೆಸಿಲಿಕಾದ ಮುಖ್ಯಸ್ಥರು ತಮ್ಮ ಪೌರೋಹಿತ್ಯದ ಜವಾಬ್ದಾರಿಯನ್ನು ನಿರ್ವಹಿಸುವ ವೇಳೆಯಲ್ಲಿ ಧರಿಸುವ ಧಾರ್ಮಿಕ ಪೋಷಾಕಿನ ಮೇಲೆ ಕೆಂಪು ಕೊಳವೆ ಅಲಂಕಾರ, ಗುಂಡಿಗಳು, ಕಾಜಾ ಮತ್ತು ಕಪ್ಪು ಮೊಜೆಟ್ಟಾ ಕೊರಳಪಟ್ಟಿ ಧರಿಸುವ ಅವಕಾಶ ಪಡೆಯುತ್ತಾರೆ.
ಒಟ್ಟಿನಲ್ಲಿ ಹರಿಹರದ ಆರೋಗ್ಯ ಮಾತೆ ಬೆಸಿಲಿಕಾ ವಿಶ್ವಮಾನ್ಯತೆ ಪಡೆದಿರುವ ಜೊತೆಗೆ ಲಕ್ಷಾಂತರ ಭಕ್ತರ ನೆಚ್ಚಿನ ತಾಣವಾಗಿದೆ. ಇಲ್ಲಿ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕರ್ನಾಟಕದ ಕೆಲವೇ ಕೆಲ ಬೆಸಿಲಿಕಾಗಳಲ್ಲಿ ಈ ತಾಣವೂ ಒಂದಾಗಿರುವುದು ದಾವಣಗೆರೆ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.