ದಾವಣಗೆರೆ: ಅದು ಹಸಿರುವಾಸಿ ಮನೆ. ಅಲ್ಲಿ ಕಾಲಿಟ್ಟರೆ ಸಾಕು ಎಲ್ಲಿ ನೋಡಿದರೂ ಸಸಿಗಳೇ ಕಾಣುತ್ತವೆ. ಸಸ್ಯಲೋಕವೇ ಅನಾವರಣಗೊಳ್ಳುತ್ತದೆ. ಮನೆಯ ಹಾಲ್ನಿಂದ ಹಿಡಿದು ಬೆಡ್ ರೂಂವರೆಗೂ ಸಸಿಗಳೇ ಕಾಣುತ್ತವೆ. ಆದ್ರೆ ಇದು ಯಾವುದೇ ಕಾಡಿನ ಮನೆಯಲ್ಲ. ಬದಲಿಗೆ ಮನೆಯನ್ನೇ ವನವಾಗಿಸಿದ ಪರಿಸರ ಪ್ರೇಮಿಯ ಮನೆ.
ದಾವಣಗೆರೆ ವಿವಿಯಲ್ಲಿ ಸೂಕ್ಷ್ಮ ಜೀವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶಿಶುಪಾಲ್ ಕಳೆದ 22 ವರ್ಷಗಳಿಂದ ಮನೆಯಲ್ಲಿಯೇ ಮಲೆನಾಡು ನೆನಪಿಸುವಂತಹ ಪರಿಸರ ನಿರ್ಮಿಸಿದ್ದಾರೆ. ಉದ್ಯಾನವನ ಮತ್ತು ಪರಿಸರ ಪ್ರೇಮಿ ಕುಟುಂಬ ಸುಮಾರು 7 ವರ್ಷದಿಂದ ಸಸ್ಯಲೋಕ ಸೃಷ್ಟಿಗೆ ಮುಂದಾಗಿದೆ.
ಮನೆ ಪ್ರವೇಶ ಮಾಡಿದ್ರೆ ಸಾಕು ಸಾಲು ಸಾಲಾಗಿ ಕಾಣುವ ವಿವಿಧ ತರಹದ ಸಸ್ಯರಾಶಿಗಳು, ಹೂ ಗಿಡಗಳು, ವಿವಿಷ್ಟವಾದ ವಿದೇಶಿ ಸಸ್ಯ ತಳಿಗಳನ್ನ ಒಂದೇ ಸೂರಿನಡಿ ನೋಡುವ ಅವಕಾಶ ಲಭಿಸುತ್ತೆ. ಇಲ್ಲಿ 30ಕ್ಕೂ ಹೆಚ್ಚು ವಿವಿಧ ಬಣ್ಣಗಳ ದಾಸವಾಳ, ಬಗೆಗೆಯ ಗುಲಾಬಿ ಹೂಗಳು, ಸೇವಂತಿಗೆ, ಬಾಳೆಗಿಡ ಸೇರಿ ಸುಮಾರು 600ಕ್ಕೂ ಹೆಚ್ಚು ಸಸ್ಯ ತಳಿಗಳನ್ನು ಬೆಳೆಸಿದ್ದಾರೆ ಡಾ. ಶಿಶುಪಾಲ್.
ಪರಿಸರ ಪ್ರೇಮಿಗಳಾದ ಇವರು ಮನೆಯನ್ನೇ ಹಸಿರುಮಯವಾಗಿಸುವ ಸಂಕಲ್ಪ ತೊಟ್ಟು, ಕಳೆದ 7 ವರ್ಷದಿಂದ ಆರಂಭವಾದ ಸಸ್ಯಲೋಕ ಸೃಷ್ಟಿ ಕಾರ್ಯ ಈಗಲೂ ಮುಂದುವರೆದಿದೆ. ರಾಜ್ಯದ ಯಾವುದೇ ಕಡೆ ಹೋದರೂ ಆ ಭಾಗದ ಗಿಡ, ಬೀಜಗಳನ್ನು ತಂದು ಇಲ್ಲಿ ನೆಟ್ಟು ಪೋಷಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ತೋಟಗಾರಿಕೆ ಇಲಾಖೆಯಿಂದ ನಡೆಯುವ ಸ್ಪರ್ಧೆಯಲ್ಲಿ ಬೆಸ್ಟ್ ಹೋಂ ಗಾರ್ಡನ್ ಪ್ರಶಸ್ತಿ ಕೂಡ ಲಭಿಸಿದೆ.
ಅಲ್ಲದೆ ಭಾರತೀಯ ವಿಕಾಸ ಪರಿಷತ್ 'ಹಸಿರುವಾಸಿ ಮನೆ' ಎಂದು ಘೋಷಿಸಿ ಪ್ರಶಸ್ತಿ ನೀಡಿರುವುದು ಶಿಶುಪಾಲ್ ಪರಿಸರ ಪ್ರೇಮಕ್ಕೆ ಸಾಕ್ಷಿ. ಕಡಿಮೆ ಬಿಸಿಲಿನಲ್ಲಿಯೂ ಮನೆಯ ಒಳಗಡೆ ಆಮ್ಲಜನಕ ಹೊರಹಾಕುವ ಸಸಿಗಳನ್ನು ಪೋಷಿಸುತ್ತಿರುವುದು ಇಲ್ಲಿನ ಮತ್ತೊಂದು ಸ್ಪೆಷಾಲಿಟಿ. ಇನ್ನು ಈ ಮನೆಗೆ ಶಾಂತಿರತ್ನ ಎಂಬ ಹೆಸರಿಡಲಾಗಿದೆ.
ಡಾ. ಶಿಶುಪಾಲ್ ಕೆಲಸಕ್ಕೆ ಹೋದ್ರೆ ಗಿಡಗಳಿಗೆ ನೀರು ಹಾಕುವುದು, ನೋಡಿಕೊಳ್ಳುವ ಕೆಲಸವನ್ನು ಪತ್ನಿ ಪದ್ಮಲತಾ ಮಾಡುತ್ತಾರೆ. ಇಂಗು ಗುಂಡಿಯ ಮೂಲಕ ಮಳೆ ನೀರು ಸಂಗ್ರಹಿಸಿದ್ದಾರೆ. ಅಲ್ಲದೆ ಗಿಡಗಳನ್ನು ಇಡಲು ಸುಮಾರು 30000 ರೂಪಾಯಿ ವೆಚ್ಚದ ಸ್ಟ್ಯಾಂಡ್ ಅನ್ನೂ ನಿರ್ಮಿಸಿದ್ದಾರೆ. ಸಾವಯವ ಗೊಬ್ಬರ ಮತ್ತು ನೈಸರ್ಗಿಕವಾಗಿ ಸಿಗುವ ತೆಂಗಿನ ಮರದ ದಿಂಬಿನಲ್ಲಿಯೂ ಸಹ ಸಸಿಗಳನ್ನು ಬೆಳೆಸುವ ಮೂಲಕ ಸಂಪೂರ್ಣ ಪರಿಸರ ನಿರ್ಮಿತ ಮನೆಯನ್ನಾಗಿಸಿದ್ದಾರೆ.
ಹಸಿರುಮಯ ಮನೆ ನಿರ್ಮಾಣದ ಜೊತೆಗೆ ಪರಿಸರ ಫೋಟೋಗ್ರಫಿಯಲ್ಲಿ ಡಾ. ಶಿಶುಪಾಲ್ ಬೆಸ್ಟ್ ಎನಿಸಿಕೊಂಡಿದ್ದಾರೆ. ದಾವಣಗೆರೆಯಲ್ಲಿ 146 ಜಾತಿಯ ಹಕ್ಕಿಗಳನ್ನು ಗುರುತಿಸಿ ಛಾಯಾಚಿತ್ರ ತೆಗೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಡಾ. ಶಿಶುಪಾಲ್ ಅವರ ಈ ಕಾರ್ಯಕ್ಕೆ ಸುತ್ತಮುತ್ತಲಿನ ಮನೆಯವರು, ಸ್ನೇಹಿತರು, ಶಿಷ್ಯರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.