ದಾವಣಗೆರೆ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲೆಗಳು ಇನ್ನು ಆರಂಭವಾಗಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ನಡೆಯುತ್ತಿವೆ. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಸರ್ಕಾರ "ವಿದ್ಯಾಗಮ'' ಯೋಜನೆ ಜಾರಿಗೊಳಿಸಿದೆ.
ಕೊರೊನಾ ಸಮಯದಲ್ಲಿಯೂ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಸರ್ಕಾರಿ ಶಾಲೆಗಳು ಅಂದರೆ ಮೂಗು ಮುರಿಯುವ ಸಂಖ್ಯೆಯೇ ಹೆಚ್ಚು ಇರುವ ಈ ಕಾಲಗಟ್ಟದಲ್ಲಿ ಸರ್ಕಾರ ಮಾದರಿ ಹೆಜ್ಜೆ ಇರಿಸಿದೆ. ಖಾಸಗಿ ಶಾಲೆಗಳಲ್ಲಿ ಕೇವಲ ಆನ್ಲೈನ್ ಕ್ಲಾಸ್ ನಡೆಯುತ್ತಿವೆ. ಶಿಕ್ಷಣ ನೀಡುವ ಸಲುವಾಗಿ " ವಿದ್ಯಾಗಮ'' ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದು ಪೋಷಕರಿಗೂ ಇಷ್ಟವಾಗಿದೆ.
ಹೇಗೆ ನಡೆಯುತ್ತವೆ ಕ್ಲಾಸ್: ಕಾಲ್ಪನಿಕ ಕೋಣೆಯ ಪರಿಕಲ್ಪನೆಯಡಿ ಪಾಠ ಪ್ರವಚನ ಶುರುವಾಗಿದೆ. ಮೊಬೈಲ್ ಸೌಲಭ್ಯ ಇರುವ ಮಕ್ಕಳು, ಇಲ್ಲದಿರುವ ಮಕ್ಕಳ ಪಟ್ಟಿ ಮಾಡಲಾಗಿದೆ. ಯಾವ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಹಂತ ಹಂತವಾಗಿ ಪಾಠ ನಡೆಯುತ್ತಿದೆ. ಒಂದರಿಂದ ಐದನೇ ತರಗತಿ, 6ರಿಂದ 8 ಹಾಗೂ 9, 10 ನೇ ತರಗತಿಗಳವಿದ್ಯಾರ್ಥಿಗಳನ್ನು ವಿಂಗಡಣೆ ಮಾಡಲಾಗಿದೆ.
ಜನವಸತಿ ಪ್ರದೇಶಗಳಲ್ಲಿ ಕೊಠಡಿ ನೀಡಿ, ಅಲ್ಲಿಗೆ ಹೋಗಿ ಶಿಕ್ಷಕರು ಪಾಠ ಮಾಡುತ್ತಾರೆ. ಇಪ್ಪತ್ತು ಮಕ್ಕಳಂತೆ ಬ್ಯಾಚ್ ಮಾಡಿ ಬೋಧನೆ ಮಾಡಲಾಗುತ್ತದೆ. ಒಂದು ಕೋಣೆಯಲ್ಲಿ ಮೊಬೈಲ್ ಇಲ್ಲದ ಮಕ್ಕಳು, ಇನ್ನೊಂದು ಕೋಣೆಯಲ್ಲಿ ಮೊಬೈಲ್ ಸೌಲಭ್ಯ ಹೊಂದಿದವರು ಹಾಗೂ ಮೂರನೇ ಕೋಣೆಯಲ್ಲಿ ಇಂಟರ್ನ್ ನೆಟ್, ಮೊಬೈಲ್ ಇದ್ದ ಮಕ್ಕಳು ಪ್ರತ್ಯೇಕವಾಗಿ ಇರುತ್ತಾರೆ. ಸೂಕ್ತ ಸ್ಥಳ ನೋಡಿಕೊಂಡು ಮೊಬೈಲ್ ಇಲ್ಲದ ಬಡ, ಕೂಲಿ ಕಾರ್ಮಿಕರ ಮಕ್ಕಳಿಗೆ ಕೊಠಡಿಯಲ್ಲಿ ತರಗತಿ ನಡೆದರೇ, ಇಂಟರ್ ನೆಟ್, ಮೊಬೈಲ್ ಇದ್ದವರಿಗೆ ಪಠ್ಯಕ್ಕೆ ಸಂಬಂಧಿಸಿದಂತೆ ಶಿಕ್ಷಕರು ವಾಯ್ಸ್ ಮೆಸೇಜ್, ವಿಡಿಯೋ ಕಳುಹಿಸುತ್ತಾರೆ.
ವಾರದ ಬಳಿಕ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಪರಾಮರ್ಶೆ ನಡೆಸಲಾಗುತ್ತದೆ. ಇನ್ನು ಬಡ ಮಕ್ಕಳಿಗೆ ಹೋಂ ವರ್ಕ್ ನೀಡಿ, ಏಳು ದಿನಗಳ ನಂತರ ಕಲಿಕೆಯ ಪ್ರಗತಿಯನ್ನು ಗಮನಿಸಲಾಗುತ್ತದೆ.
ಸರ್ಕಾರಿ ಶಾಲೆಗಳತ್ತ ಮಕ್ಕಳು, ಪೋಷಕರು: ಖಾಸಗಿ ಶಾಲೆಗಳಲ್ಲಿ ಈ ವರ್ಷ ಪಾಠ ಪ್ರವಚನ ಆನ್ಲೈನ್ ನಲ್ಲಿಯೇ ನಡೆಯುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ. ಈಗಾಗಲೇ ಖಾಸಗಿ ಶಾಲೆಯ ಅನೇಕ ಮಕ್ಕಳು ದಾಖಲಾತಿ ಪಡೆಯುತ್ತಿದ್ದು, ಈ ವರ್ಷದ ಪ್ರವೇಶದ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆ ಇದೆ. ಇದಕ್ಕೆ ಕಾರಣ "ವಿದ್ಯಾಗಮ'' ಕಾರ್ಯಕ್ರಮ ಅನುಷ್ಠಾನ.
ಆರ್ಥಿಕ ಸಂಕಷ್ಟ, ತರಗತಿ ಪ್ರಾರಂಭ ಆಗಿರುವುದು ಸೇರಿದಂತೆ ನಾನಾ ಕಾರಣಗಳಿಂದ ಮಕ್ಕಳನ್ನು ನಮ್ಮಲ್ಲಿ ಸೇರಿಸಲಾಗುತ್ತಿದೆ ಎಂದು ಡಿಡಿಪಿಐ ಪರಮೇಶ್ವರಪ್ಪ ತಿಳಿಸಿದರು. ಜಿಲ್ಲೆಯಲ್ಲಿ 1075 ಪ್ರಾಥಮಿಕ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು, 133 ಪ್ರೌಢಶಾಲೆ, ಅನುದಾನಿತ ಹಾಗೂ ಅನುದಾನ ರಹಿತ 650 ಶಾಲೆಗಳಿದ್ದು, ಒಟ್ಟು 2 ಲಕ್ಷದ 54 ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 1 ಲಕ್ಷದ 50 ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳು ಇದ್ದರೆ, ಬೇರೆ ಶಾಲೆಗಳಲ್ಲಿ 1 ಲಕ್ಷದ 2 ಸಾವಿರ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 8ರಿಂದ 10ನೇ ತರಗತಿ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪಾಠ ಪ್ರಸಾರವಾಗುತ್ತಿದೆ. ಇದನ್ನು ನೋಡಿ ಕಲಿಕೆ ಮುಂದುವರಿಸಿದ್ದಾರೆ ಎಂದು ಅವರು ಹೇಳಿದರು.