ದಾವಣಗೆರೆ: ಭಾರತ್ ಕಾಲೋನಿ ರಸ್ತೆಯಲ್ಲಿನ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯ ಪುಷ್ಪ ಹರಾಜು ಕೇಂದ್ರಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಪುಷ್ಪ ಹರಾಜು ಕೇಂದ್ರಕ್ಕೆ ಈ ಹಿಂದೆ ಹೋಲ್‍ಸೇಲ್ ಪುಷ್ಪ ಮಾರುಕಟ್ಟೆಯನ್ನು ಶಿಫ್ಟ್ ಮಾಡಿದಾಗ ಕೆಲವು ಮಾರಾಟಗಾರರು ಇಲ್ಲಿಗೆ ಬಂದರು. ಇನ್ನೂ ಕೆಲವರು ಅಲ್ಲಿಯೇ ಉಳಿದರು. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಂದು ವಾರದಲ್ಲಿಯೇ ಇಲ್ಲಿಗೆ ಸ್ಥಳಾಂತರ ಮಾಡಿ ಎಲ್ಲಾ ಹೂವಿನ ವ್ಯಾಪಾರ ಇಲ್ಲಿಯೇ ನಡೆಯುವಂತೆ ನೋಡಿಕೊಳ್ಳಲಾಗುವುದು. ಹಣ್ಣಿನ ಕೇಂದ್ರವೂ ಪಕ್ಕದಲ್ಲಿಯೇ ಇರುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಪುಷ್ಪ ಹರಾಜು ಕೇಂದ್ರದಲ್ಲಿ ಸಾಕಷ್ಟು ವಿಶಾಲವಾದ ಜಾಗವಿದೆ. ಆದರೆ ಇಲ್ಲಿ ಇರುವ ದೊಡ್ಡ ಚರಂಡಿಯಿಂದ ಕೆಟ್ಟ ವಾಸನೆ ಬರುತ್ತದೆ ಎಂಬುದರ ಬಗ್ಗೆ ವ್ಯಾಪಾರಸ್ಥರ ದೂರುಗಳಿದ್ದು, ನನಗೂ ಅದೇ ಅಭಿಪ್ರಾಯವಿದೆ. ಅದನ್ನು ಸರಿಪಡಿಸಿ ಅವರಿಗೆ ಬೇಕಾದ ಸೌಲಭ್ಯ ಒದಗಿಸಿ ಕೊಡಲಾಗುವುದು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಅತ್ಯಂತ ಸುಸಜ್ಜಿತವಾದ ಪುಷ್ಪ ಹರಾಜು ಕೇಂದ್ರ ಒದಗಿಸಲಾಗಿದೆ. ಇದರಲ್ಲಿ ರೈತರಿಗೆ ವಿಶ್ರಾಂತಿ ಕೊಠಡಿ, ಕ್ಯಾಂಟೀನ್ ಹಾಗೂ ಕೋಲ್ಡ್ ಸ್ಟೋರೇಜ್‍ನಿಂದ ಹಿಡಿದು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಇದೆ. ಇಲ್ಲಿ ಬಿಟ್ಟು ಬೇರೆ ಎಲ್ಲಿಯೂ ಮಾರಾಟ ಮಾಡಲು ಅವಕಾಶ ಮಾಡಿಕೊಡುವುದಿಲ್ಲ. 2.50 ಕೋಟಿ ರೂಪಾಯಿ ಖರ್ಚು ಮಾಡಿ ಸುಮಾರು 7 ರಿಂದ 8 ಎಕರೆ ಜಾಗದಲ್ಲಿ ಮಾಡಿರುವ ಈ ಮಾರುಕಟ್ಟೆ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಎಂದರು.