ದಾವಣಗೆರೆ: ಕೋವಿಡ್-19 ನಿಯಮಾವಳಿ ಪ್ರಕಾರವೇ ಗಣೇಶೋತ್ಸವ ಆಚರಿಸುತ್ತೇವೆ. ಒಂದು ವೇಳೆ ಆಚರಣೆ ಮಾಡುವಾಗ ಅರೆಸ್ಟ್ ಮಾಡಿದ್ರೆ ಜೈಲಿನಲ್ಲೇ ಗಣಪತಿ ಹಬ್ಬ ಆಚರಿಸುತ್ತೇವೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹರಡುವ ನೆಪವೊಡ್ಡಿ ಇದೇ ಮೊದಲ ಬಾರಿಗೆ ಸಾರ್ವಜನಿಕ ಗಣೇಶ ಉತ್ಸವವನ್ನು ಸರ್ಕಾರ ನಿಷೇಧಿಸಿದೆ. ಆದರೆ ಬಾರ್, ಮಾಲ್‌ಗಳ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಗಣೇಶ ಉತ್ಸವಕ್ಕೆ ನಿಷೇಧ ಹೇರಿರುವುದು ವಿಪರ್ಯಾಸ. ಕೋವಿಡ್ ನಿಯಮ ಅನ್ವಯ ಸಾರ್ವಜನಿಕ ಗಣೇಶ ಉತ್ಸವ ಆಚರಿಸುತ್ತೇವೆ. ಸಂಪ್ರದಾಯ ಮುರಿಯದಂತೆ ಆಚರಣೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಕೃತ್ಯ. ಇದರಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಕೈವಾಡವಿದೆ. ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಈ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿತ್ತು. ಈಗ ಅಧಿಕಾರವಿದೆ. ಆದ್ರೂ ಈ ಸಂಘಟನೆಗಳ ನಿಷೇಧಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದರು.