ದಾವಣಗೆರೆ: ಲೋಕಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರೇ ಬಿಜೆಪಿ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸಿದ್ದೇಶ್ವರ್ ಸಭೆ, ಸಮಾವೇಶ ನಡೆಸುತ್ತಾ ಬಂದಿದ್ದಾರೆ. ಇಂದು ದಕ್ಷಿಣ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಎದುರಾಳಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಸತತ ಮೂರು ಬಾರಿ ಗೆದ್ದಿರುವ ಹ್ಯಾಟ್ರಿಕ್ ಸಂಸದ ಜಿ.ಎಂ.ಸಿದ್ದೇಶ್ವರ್, ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು, ಮತದಾರರು ಕೊನೆಯ ಬಾರಿಯೂ ಕೂಡ ಕೈ ಹಿಡಿಯುವ ಮೂಲಕ ದಾವಣಗೆರೆ ಅಭಿವೃದ್ಧಿ ಕೆಲಸ ಮುಂದುವರೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ತಮ್ಮ ಐದು ವರ್ಷಗಳ ಸಾಧನೆಯನ್ನು ತಿಳಿಸಿದ ಜಿ.ಎಂ.ಸಿದ್ದೇಶ್ವರ್, ದಾವಣಗೆರೆ ನಗರದ ಅಭಿವೃದ್ಧಿಗೆ 1000 ಕೋಟಿ ಮೊತ್ತದ ಸ್ಮಾರ್ಟ್ ಸಿಟಿ ಯೋಜನೆಯಡಿ 396 ಕೋಟಿ ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು ದಾವಣಗೆರೆಗೆ ತರುವಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಚಿತ್ರದುರ್ಗ - ದಾವಣಗೆರೆ-ಹುಬ್ಬಳ್ಳಿ ಹೆದ್ದಾರಿಗೆ 3000 ಕೋಟಿ, ಚಿತ್ರದುರ್ಗದಿಂದ ದಾವಣಗೆರೆ -ಹರಿಹರ-ಹುಬ್ಬಳ್ಳಿವರೆಗೆ ಆರು ಪಥದ ಹೆದ್ದಾರಿ ನಿರ್ಮಾಣಕ್ಕೆ 3000 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.
ಜೊತೆಗೆ ದಾವಣಗೆರೆಯಲ್ಲಿ ಅಂಚೆ ಪಾಸ್ಪೋರ್ಟ್ ಕೇಂದ್ರ ಸ್ಥಾಪನೆ ಮಾಡಲು ಶ್ರಮ ವಹಿಸಿದ್ದೇನೆ. ಇನ್ನೂ ಹಲವು ಸೇವೆಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ಹೀಗಾಗಿ ಈ ಬಾರಿ ಕೂಡ ನನ್ನನ್ನು ಅತೀ ಹೆಚ್ಚು ಅಂತರದಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಶಾಮನೂರು ವಿರುದ್ಧ ಹರಿಹಾಯ್ದ ಆಯನೂರು ಮಂಜುನಾಥ್, ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ದಳಕ್ಕೆ ಬಿಟ್ಟುಕೊಟ್ಟಿದ್ದಾರೆ. ಇನ್ನು ದಾವಣಗೆರೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಹೊರಗೆ ಬರ್ತಿಲ್ಲ. ಮಧ್ಯಾಹ್ನ 12 ಗಂಟೆ ನಿದ್ದೆಯಿಂದ ಎದ್ದು ಬರುತ್ತಾರೆ. ಯಾವಾಗಲೂ ಅವರನ್ನು ನೋಡಿದರೆ ಈಗ ತಾನೆ ಎದ್ದು ಬಂದಿದ್ದಾರೆ ಎಂದು ಎನಿಸುತ್ತದೆ. ಮಾಜಿ ಸಿಎಂ ಕೂಡ ಕೂತಲ್ಲೆ ತೂಕಡಿಸುತ್ತಾರೆ. ಟವರ್ ಟೀಚರ್ ನಿದ್ದೆರಾಮಯ್ಯ ಎಂದು ಹೆಸರು ಬರೆದುಕೊಳ್ಳುವುದು ಬಿಟ್ಟು ಸಿದ್ದರಾಮಯ್ಯ ಎಂದು ತಪ್ಪಾಗಿ ಬರೆದಿದ್ದಾರೆ ಎಂದು ಲೇವಡಿ ಮಾಡಿದರು.