ದಾವಣಗೆರೆ: ಸಂಸದ ಡಿ.ಕೆ.ಸುರೇಶ್ ನನ್ನ ಆತ್ಮೀಯ ಮಿತ್ರ. ಇಡೀ ಕೈ ನಾಯಕರು ಭ್ರಮೆಯಲ್ಲಿದ್ದಾರೆ. ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿ ಇರುವುದರಿಂದ ಯಾರು ಏನೇ ಕೂಗಾಡಿದ್ರೂ ಪ್ರಯೋಜನವಿಲ್ಲ ಎಂದು ಸಂಸದ ಜಿ. ಎಂ.ಸಿದ್ದೇಶ್ವರ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ತಮಿಳುನಾಡಿನಲ್ಲಿ ಡಿಎಂಕೆ ಹಾಗು ಕಾಂಗ್ರೆಸ್ ಸರ್ಕಾರ ಇದೆ. ಅವರದ್ದೇ ಸರ್ಕಾರ ಮೇಕೆದಾಟು ವಿಚಾರವನ್ನು ಕೋರ್ಟ್‌ಗೆ ಹಾಕಿದೆ, ಅದನ್ನು ಹಿಂಪಡೆಯಲಿ. ನಮ್ಮ ಸರ್ಕಾರ ಕೆಲಸ ಆರಂಭಿಸಲಿದೆ ಎಂದರು.
ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ಶಂಖ ಊದಿ ಗೆದ್ದರು. ಬಳಿಕ, ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿ ಗೆದ್ದರು. ಈ ಬಾರಿಯೂ ಗೆಲ್ತೇವೆ ಎಂದುಕೊಂಡು ಪಾದಯಾತ್ರೆ ಮಾಡ್ತಿದ್ದಾರೆ. ಆದರೆ, ಅದು ಅವರ ಭ್ರಮೆ ಎಂದು ಹೇಳಿದರು.
ಇನ್ನೊಂದೆಡೆ, ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯಗೆ ಜ್ಞಾನವೇ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಕಾಂಗ್ರೆಸ್ ಪಾದಯಾತ್ರೆ ಅಂತ್ಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಸೂಕ್ಷ್ಮ ವಿಷಯವಾಗಿದೆ. ಇದನ್ನು ಸೂಕ್ಷ್ಮವಾಗಿಯೇ ಬಗೆಹರಿಸಿಕೊಳ್ಳಬೇಕು ಎಂದರು.
'ಯಾವುದೇ ಕಾರಣಕ್ಕೂ ಲಾಕ್ಡೌನ್ ಇಲ್ಲವೇ ಇಲ್ಲ'
ಲಾಕ್ಡೌನ್ ಒಂದೇ ಕೋವಿಡ್ಗೆ ಪರಿಹಾರವಲ್ಲ. ಜನರ ಜೀವನ ದುಸ್ತರವಾಗಿದೆ. ಎರಡು ವರ್ಷದಿಂದ ಜನರು ಅನೇಕ ಕಷ್ಟಗಳಿಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಬೇಡ ಎಂದರು. ಸಿಎಂ ಮುಂದೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಬಣ ಆಗುತ್ತಿದ್ದು, ಜನರು ಮೈಮರೆತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಜನರು ಸಹಕಾರ ಕೊಡಬೇಕು. ಸರ್ಕಾರದಿಂದ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಮೆಕ್ಕೆಜೋಳ ಖರೀದಿದಾರರಿಂದ ವಂಚನೆ: ರೈತರಿಗೆ ಹಣ ವಾಪಸ್ ಕೊಡಿಸಿದ ಎಸ್ಪಿ ರಿಷ್ಯಂತ್