ದಾವಣಗೆರೆ: ಕೊರೊನಾ ತಂದಿಟ್ಟ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಿದೆ ಎಂದು ದಾವಣಗೆರೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಧನ ಬೆಲೆ ಏರಿಕೆಯಿಂದ ತರಕಾರಿ ಆಮದು ಹಾಗು ರಫ್ತಿನ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ನಿತ್ಯದ ಅಗತ್ಯಕ್ಕೆ ಬೇಕಾದ ತರಕಾರಿ ಬೆಲೆ ಕೂಡ ದಿನೇ-ದಿನೆ ಏರಿಕೆಯಾಗುತ್ತಿದೆ ಎಂದು ಬೆಣ್ಣೆನಗರಿ ಜನತೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಿಂದ ತರಕಾರಿಗಳನ್ನು ಬೇರೆ ರಾಜ್ಯಗಳಿಗೆ ಆಮದು ಹಾಗೂ ರಫ್ತು ಮಾಡುವುದು ಸರ್ವೇ ಸಾಮಾನ್ಯ. ಅದ್ರೇ ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಕೇಂದ್ರ ಸರ್ಕಾರ ಹೆಚ್ಚು ಮಾಡಿದ ಹಿನ್ನೆಲೆ ತರಕಾರಿ ದರದ ಮೇಲೂ ತನ್ನ ಪರಿಣಾಮ ಬೀರಿದೆ. ಇಂಧನ ಬೆಲೆ ಹೆಚ್ಚಾದ ಹಿನ್ನೆಲೆ, ಬೇರೆ ರಾಜ್ಯಗಳಿಂದ ದಾವಣಗೆರೆಗೆ ಆಮದು ಆಗುವ ತರಕಾರಿಯ ಸಾಗಾಟಕ್ಕೆ ಪ್ರತಿ ಲೋಡ್ಗೆ 10 ರಿಂದ 15 ಸಾವಿರ ರೂ. ಹಣವನ್ನು ಲಾರಿ ಮಾಲೀಕರು ಹೆಚ್ಚು ಮಾಡಿದ್ದಾರೆ. ಈ ಹಿನ್ನೆಲೆ ಸ್ಥಳೀಯವಾಗಿ ತರಕಾರಿ ದರಗಳು ಕೂಡ ಗಗನಕ್ಕೇರಿವೆ.
ಇದನ್ನು ಹೊರತು ಪಡಿಸಿದರೆ ಸ್ಥಳೀಯವಾಗಿ ತರಕಾರಿ ಸಾಗಣೆ ಮಾಡಲು ಪ್ರತಿ ಲೋಡ್ಗೆ 5 ರಿಂದ 6 ಸಾವಿರ ರೂ. ಹಣವನ್ನು ಹೆಚ್ಚು ಮಾಡಿದ್ದು, ಚಿಕ್ಕ-ಪುಟ್ಟ ತರಕಾರಿ ಮಾರಾಟಗಾರರು ಸಹ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಗ್ರಾದಿಂದ ದಾವಣಗೆರೆಗೆ ಆಮದು ಆಗುವ ಆಲೂಗಡ್ಡೆ ಲೋಡ್ಗೆ 20 ಸಾವಿರ ರೂಪಾಯಿ ಹೆಚ್ಚು ಮಾಡಿದ್ದು, ದಲ್ಲಾಳಿಗಳು, ವರ್ತಕರು ಕಂಗೆಟ್ಟು ಸ್ಥಳೀಯವಾಗಿ ತರಕಾರಿ ದರಗಳನ್ನು ಹೆಚ್ಚು ಮಾಡಿದ್ದಾರೆ. ಅದರ ಹೊರೆಯೀಗ ಜನಸಾಮಾನ್ಯರ ಮೇಲೆ ಬಿದ್ದು, ಉತ್ತಮ ಜೀವನ ನಡೆಸುವುದು ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಡಿಸೇಲ್ - ಪೆಟ್ರೋಲ್ ದರ ಹೆಚ್ಚಾಗಿದ್ದರಿಂದ ದಾವಣಗೆರೆಯಲ್ಲಿ ಟೊಮೇಟೊ ಒಂದು ಬಾಕ್ಸ್ಗೆ 400 ರೂಪಾಯಿ ಆಗಿದೆ. ಕ್ಯಾರೆಟ್ 20 ರಿಂದ 50 ರೂ., ಬೀನ್ಸ್ 40 ರಿಂದ 50 ರೂ. ಆಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಇನ್ನೂ ದಾವಣಗೆರೆ ಎಪಿಎಂಸಿಗೆ ತರಕಾರಿ ಆಮದು ಹಾಗೂ ರಫ್ತು ಮಾಡಲು ಯಾರೂ ಕೂಡ ಮುಂದೆ ಬರುತ್ತಿಲ್ಲವಂತೆ.
ಈ ಸುದ್ದಿಯನ್ನೂ ಓದಿ: ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ: ದುಬಾರಿ ದುನಿಯಾದಲ್ಲಿ ಬದುಕುವುದೇ ಕಷ್ಟ ಎನ್ನುತ್ತಾರೆ ಕುಂದಾನಗರಿ ಜನತೆ!
ಒಟ್ಟಾರೆ ಕೇಂದ್ರ ಸರ್ಕಾರ ದಿನೇ-ದಿನೆ ಇಂಧನದ ಬೆಲೆ ಹೆಚ್ಚು ಮಾಡುತ್ತಿರುವುದರಿಂದ ಅದರ ಹೊರೆ ತರಕಾರಿ ಆಮದು ಹಾಗು ರಫ್ತಿನ ಮೇಲೆ ಬೀಳುತ್ತಿದೆ.