ದಾವಣಗೆರೆ: ಮಹಾನಗರ ಪಾಲಿಕೆಯ ನಕಲಿ ದಾಖಲೆಗೆ ಸೀಲ್ ಹಾಗೂ ಅಧಿಕಾರಿಗಳ ಪೋರ್ಜರಿ ಸಹಿ ಮಾಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಮಹೇಶ್ ಹಾಗೂ ಈತನಿಗೆ ಸಹಕರಿಸಿದ ಆನೆಕೊಂಡ ಗ್ರಾಮದ ಗುರುರಾಜ್ ಮತ್ತು ಎ. ಆರ್. ವೆಂಕಟೇಶ್ ಎಂಬುವವರು ಬಂಧಿತ ಆರೋಪಿಗಳು ಎಂದು ಎಸ್ಪಿ ಹನುಮಂತರಾಯ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಈ ಆರೋಪಿಗಳು ನೇತ್ರಾವತಿ ಮತ್ತು ರಾಜೇಶ್ವರಿ ಸ್ವಯಂಘೋಷಿತ ಆಸ್ತಿ ತೆರಿಗೆ ನಮೂನೆ -3 ಮತ್ತು ಇತರೆ ನಕಲಿ ದಾಖಲೆಗಳನ್ನು ಮಹಾನಗರ ಪಾಲಿಕೆಯಿಂದ ನೀಡಿದಂತೆಯೇ ನೀಡಿದ್ದಾರೆ. ಜೊತೆಗೆ ಪಾಲಿಕೆ ಅಧಿಕಾರಿಗಳ ನಕಲಿ ಸಹಿ ಮತ್ತು ಸೀಲ್ ಪೋರ್ಜರಿ ಮಾಡಿದ್ದಾರೆ ಎಂದು ಪಾಲಿಕೆಯ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ವೇಳೆ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ಪಾಲಿಕೆಗೆ ಬರಬೇಕಾದ ಕಂದಾಯ ವಂಚಿಸಿ ಸಾರ್ವಜನಿಕರು ಹಾಗೂ ಪಾಲಿಕೆಗೆ ಮಧ್ಯವರ್ತಿ ಮಹೇಶ್ ಮೋಸ ಮಾಡಿರುವುದು ಗೊತ್ತಾಗಿದೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಗುರುರಾಜ್ ಹಾಗೂ ವೆಂಕಟೇಶ್ ಎಂಬುವವರು ಸಹಕಾರ ನೀಡಿರುವುದು ಬೆಳಕಿಗೆ ಬಂದಿದೆ. ಈ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪಾಲಿಕೆಯ ನಕಲಿ ಸೀಲ್ ಹಾಗೂ ಚಲನ್‌ಗಳನ್ನು ಸೃಷ್ಟಿಸಿ ಸಾರ್ವಜನಿಕರಿಂದ ಹಣ ಪಡೆದು ಹಣ ಪಾಲಿಕೆಯ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡದೇ ಸ್ವಂತಕ್ಕೆ ಬಳಸಿಕೊಂಡು ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇದೇ ರೀತಿಯಲ್ಲಿ ಹಲವು ವರ್ಷಗಳಿಂದ ಹಲವರು ಈ ದಂಧೆಯಲ್ಲಿ ಭಾಗಿಯಾಗಿರುವುದಾಗಿ ಮಾಹಿತಿ ಇದ್ದು, ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಎಸ್ಪಿ ತಿಳಿಸಿದರು.