ದಾವಣಗೆರೆ : ಮಾಜಿ ಹಾಗೂ ಹಾಲಿ ಶಾಸಕರು ತಮಗೆ ಸಂಬಂಧ ಪಟ್ಟ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ ಸಹಾಯಧನ ಪಡೆದುಕೊಂಡು ಸರ್ಕಾರಕ್ಕೆ ದ್ರೋಹ ಬಗೆದಿದ್ದಾರೆ ಎಂದು ರೈತ ಮುಖಂಡ ಚಿನ್ನಸಮುದ್ರ ಶೇಖರ್ ನಾಯ್ಕ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಪಂಗಡದವರು ಸಾರ್ವಜನಿಕವಾಗಿ ನಡೆಸುವ ಅನುದಾನಿತ ಶಾಲೆಗಳಿಗಳ ಕೊಠಡಿ ನಿರ್ಮಾಣಕ್ಕೆ ಹಾಗೂ ಇನ್ನಿತರ ಕೆಲಸಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಸಹಾಯಧನ ಪಡೆಯಬಹುದು ಎಂಬ ನಿಯಮವಿದೆ.
ಆದರೆ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿಜೆಪಿಯ ಬಸವರಾಜ್ ನಾಯ್ಕ, ಶಿವಮೂರ್ತಿ ನಾಯ್ಕ್ ಹಾಗೂ ಹಾಲಿ ಶಾಸಕ ಪ್ರೊ. ಲಿಂಗಣ್ಣನವರು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಸಾರ್ವಜನಿಕವಾಗಿ ನಡೆಸದೆ, ತಮ್ಮ ಸಂಬಂಧಿಕರು ಹಾಗೂ ಕುಟುಂಬ ಸದಸ್ಯರನ್ನು ಸೇರಿಸಿ ಕಾರ್ಯಕಾರಿ ಸಮಿತಿ ರಚಿಸಿದ್ದಾರೆ. ಆ ಸಮಿತಿಯಲ್ಲಿ ಬೇರೆ ಸಾರ್ವಜನಿಕರು ಯಾರೂ ಇಲ್ಲದೆ ಇದ್ದರು ಕೂಡ, ತಮ್ಮ ಸಂಸ್ಥೆಗಳಿಗೆ ಕೋಟಿಗಟ್ಟಲೆ ಸಹಾಯಧನ ಪಡೆದಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ : ತೆರಿಗೆ ವಂಚಿಸಿ ಕಬ್ಬಿಣದ ಸರಳು ಸಾಗಣೆ: ಬರೋಬ್ಬರಿ 5 ಲಕ್ಷ ರೂ. ದಂಡ
ಈ ಮೂವರು ಮಾಜಿ ಹಾಗೂ ಹಾಲಿ ಶಾಸಕರಿಗೆ ಸೇರಿದ ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿ, ಸಾರ್ವಜನಿಕವಾಗಿ ನಡೆಸದೆ ಇರುವ ಒಟ್ಟು ಹತ್ತು ಸಂಸ್ಥೆಗಳು, ಹೀಗೆ ಸುಳ್ಳು ದಾಖಲೆ ನೀಡಿ ಸುಮಾರು ಹತ್ತು ಕೋಟಿಯಷ್ಟು ಹಣವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದುಕೊಂಡಿವೆ. ತಕ್ಷಣ ಆ ಹಣವನ್ನು ಬಡ್ಡಿ ಸಮೇತ ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಹಣ ಪಡೆದಿರುವ ಸಂಸ್ಥೆಗಳು ಯಾವುವು?
ಮಾಜಿ ಕಾಂಗ್ರೆಸ್ ಶಾಸಕ ಶಿವಮೂರ್ತಿನಾಯ್ಕಗೆ ಸೇರಿದ ದೇವರಾಜ ಅರಸು ಶಿಕ್ಷಣ ಸಂಸ್ಥೆ ಒಂದು ಕೋಟಿ ಮತ್ತು ಮಾಜಿ ಶಾಸಕ ಬಸವರಾಜ್ ನಾಯ್ಕಗೆ ಸೇರಿದ ರಂಗನಾಥ ಸ್ವಾಮಿ ಶಿಕ್ಷಣ ಸಂಸ್ಥೆ ಒಂದು ಕೋಟಿ ಪಡೆದುಕೊಂಡಿದೆ.
ಸಾರ್ವಜನಿಕರ ಸಂಸ್ಥೆಗೆ ಹಣ ಬಿಡುಗಡೆ ಮಾಡದ ಸಮಾಜ ಕಲ್ಯಾಣ ಅಧಿಕಾರಿ, ಕುಟುಂಬ ಸದಸ್ಯರಿರುವ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಶೇಖರ್ ನಾಯ್ಕ ಆರೋಪಿಸಿದ್ದಾರೆ.