ದಾವಣಗೆರೆ: ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಾಕ್ಸಮರ ಮುಂದುವರೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅವರಿಗೆ ಬರುವ ಕೋಟಿ ಕೋಟಿ ಆದಾಯ ನಾಯಿ ಹಾಲಿದ್ದಂತೆ ಎಂದು ನಾನು ಮತ್ತೊಮ್ಮೆ ಹೇಳುತ್ತೇನೆ. ಅವರು ಮೂರು ಬಾರಿ ಸಂಸದರಾಗಿದ್ದಾರೆ. ಆದರೆ ದಾವಣಗೆರೆಗೆ ತನ್ನ ಕೊಡುಗೆ ಏನಿದೆ? ಎಂದು ಜನತೆಗೆ ತಿಳಿಸಲಿ. ಈ ಬಗ್ಗೆ ಬೇಕಾದ್ರೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಲ್ಲಿಕಾರ್ಜುನ್ ಸವಾಲೆಸೆದರು.
ಜಿ.ಎಂ.ಸಿದ್ದೇಶ್ವರ್ ಕುಟುಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ನೆನೆಯಬೇಕು. ಅವರಿಗೆ 350 ಕೋಟಿ ರೂ ಆದಾಯ ಮೈನಿಂಗ್‌ನಿಂದ ಅನಾಯಾಸವಾಗಿ ಬಂತು. ಜಿ.ಎಂ ಸಹೋದರ ಮೈನಿಂಗ್ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಕ್ಕೆ ದಾಖಲೆಗಳಿವೆ. ಈ ಪ್ರಕರಣದಲ್ಲಿ ಜಿ.ಎಂ ಸಿದ್ದೇಶ್ವರ್ ಸಿಕ್ಕಿಹಾಕಿ ಕೊಳ್ಳಬೇಕಿತ್ತು. ಆದ್ರೆ ಅವರ ಸಹೋದರ ಸಿಕ್ಕಿಹಾಕಿಕೊಂಡರು. ಬಾಪೂಜಿ ಸಂಸ್ಥೆ ಕಟ್ಟಿ ಬೆಳೆಸಿದ್ದು ಅದರ ಇತಿಹಾಸದ ಬಗ್ಗೆ ಅವರಿಗೇನು ಗೊತ್ತು. ನಾವು ಗುಮಾಸ್ತರನ್ನು ಇಟ್ಟುಕೊಂಡು ಕೆಲಸ ಮಾಡುತ್ತೇವೆ. ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತನನ್ನು ಅವರು ಕರೆದುಕೊಂಡು ಹೋಗಿ ಬೆದರಿಸಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದಲ್ಲಿ ಸಚಿವರಾಗಿರುವ ಭೈರತಿ ಬಸವರಾಜ್ ಹಾಗೂ ಆರೋಗ್ಯ ಸಚಿವ ಸುಧಾಕರ್ ನಮ್ಮ ಪಕ್ಷದಲ್ಲಿದ್ದವರೇ. ಅವರು ಏಕೆ ಬಿಜೆಪಿಗೆ ಹೋಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುಧಾಕರ್ ಸಚಿವರಾಗುವ ಮುನ್ನ ನಾನೇ ನೀವು ವೈದ್ಯಕೀಯ ಸಚಿವರಾಗಿ ಎಂದು ಸಲಹೆ ಕೊಟ್ಟಿದ್ದೆ ಎಂದರು.
ಸರ್ಕಾರಕ್ಕೆ ಬೆಡ್ ನೀಡುವ ಕುರಿತು ಸ್ಪಷ್ಟನೆ:
ದಾವಣಗೆರೆ ಮೆಡಿಕಲ್ ಕಾಲೇಜ್‌ನಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಎಬಿಆರ್ಕೆ ಕೋಟಾದಲ್ಲಿ 200 ಕ್ಕೂ ಹೆಚ್ಚು ಜನರಿಗೆ ಬೆಡ್ ಕೊಟ್ಟಿದ್ದು, ಸರ್ಕಾರದ ನೀತಿ ನಿಯಮದಂತೆ ನಡೆದುಕೊಂಡಿದ್ದೇವೆ ಎಂದರು.