ಬೆಂಗಳೂರು: ವಿಕ್ರಂ ಗೌಡ ಹಲವು ನಕ್ಸಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದು, ನಕ್ಸಲ್ ಚಟುವಟಿಕೆಯನ್ನು ನಿಗ್ರಹಿಸಲು ಆತನನ್ನು ಎನ್ಕೌಂಟರ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಕ್ಸಲ್ ಚುಟುವಟಿಕೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ ವಿಕ್ರಂ ಗೌಡ ಅವರು ಎನ್‌ಕೌಂಟರ್‌ನಲ್ಲಿ ಹತನಾಗಿರುವ ಬಗ್ಗೆ ಪ್ರಗತಿಪರ ಚಿಂತಕರು ಅನುಮಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ವಿಕ್ರಂ ಗೌಡ ಅವರಿಗೆ ಶರಣಾಗುವಂತೆ ಆದೇಶ ನೀಡಲಾಗಿತ್ತು. ಆದರೆ, ಅವರು ಶರಣಾಗಿರಲಿಲ್ಲ. ವಿಕ್ರಂ ಗೌಡ ಹಿಡಿದವರಿಗೆ ಕೇರಳ ಸರ್ಕಾರ 25 ಲಕ್ಷ ಹಾಗೂ ಕರ್ನಾಟಕ ಸರ್ಕಾರ 5 ಲಕ್ಷ ಬಹುಮಾನವನ್ನು ಘೋಷಿಸಿತ್ತು ಎಂದು ವಿವರಿಸಿದರು.
ನಬಾರ್ಡ್ ಸಾಲದ ಮೊತ್ತ ಹೆಚ್ಚಿಸುವಂತೆ ಕೇಂದ್ರ ಸಚಿವರಿಗೆ ಮನವಿ: ಇದೇ ವೇಳೆ ನವದೆಹಲಿ ಪ್ರವಾಸದ ವಿವರ ನೀಡಿದ ಮುಖ್ಯಮಂತ್ರಿಗಳು, ನಾಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲು ಸಮಯ ಕೋರಲಾಗಿದೆ. ರಾಜ್ಯಕ್ಕೆ ನಬಾರ್ಡ್ನಿಂದ ನೀಡಲಾಗುವ ಸಾಲದ ಮೊತ್ತವನ್ನು ಕಳೆದ ವರ್ಷ 5600 ಕೋಟಿ ರೂ.ಗಳಿಂದ, ಈ ವರ್ಷ 2340 ಕೋಟಿ ರೂ. ಗಳಿಗೆ ಇಳಿಸಲಾಗಿದೆ. ಆದ್ದರಿಂದ ಕೇಂದ್ರ ವಿತ್ತ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗುವುದು. ಈ ಮಧ್ಯೆ ಸಮಯಾವಕಾಶವಿದ್ದಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.
ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ: ಹೆಬ್ರಿಯ ಕಾಡಿನಲ್ಲಿ ನಕ್ಸಲ್ ನಿಗ್ರಹ ಪಡೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಂಗೌಡನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳವಾರ ಮಣಿಪಾಲದ ಕೆಎಂಸಿ ಶವಾಗಾರಕ್ಕೆ ತರಲಾಗಿತ್ತು. ಮಣಿಪಾಲ ಕೆಎಂಸಿಯ ಶವಾಗಾರದಲ್ಲಿ ರಾತ್ರಿ 12 ಗಂಟೆಗೆ ಆರಂಭವಾದ ಮರಣೋತ್ತರ ಪರೀಕ್ಷೆಯು ಬುಧವಾರ ಬೆಳಗಿನ ಜಾವ 5 ಗಂಟೆಗೆ ಪೂರ್ಣಗೊಂಡಿತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ವಿಕ್ರಂಗೌಡ ಅವರ ಸಹೋದರ ಸುರೇಶ್ ಗೌಡ ಹಾಗೂ ತಂಗಿ ಸುಗುಣ ಸೇರಿದಂತೆ ಕುಟುಂಬಸ್ಥರು ಮಣಿಪಾಲ ಶವಾಗಾರಕ್ಕೆ ಆಗಮಿಸಿದ್ದಾರೆ. ಕೂಡ್ಲುವಿನಲ್ಲಿ ವಿಕ್ರಂ ಗೌಡ ಅವರ ಮೂಲಮನೆ ಇದ್ದು, ಇದೀಗ ಅವರ ತಂಗಿ ಮೂಲ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಇಲ್ಲಿ ಯಾರೂ ವಾಸವಾಗಿಲ್ಲ. ತಂಗಿ ಮತ್ತು ತಮ್ಮ ಮನೆಯ ಆವರಣದಲ್ಲಿ ಅಂತ್ಯ ಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಕ್ರಂ ಗೌಡ ಅವರ ತಂಗಿ ಸುಗುಣ, ನನ್ನ ಅಣ್ಣನನ್ನು ಅನಾಥ ಶವವಾಗಿ ಸುಡುವುದು ಬೇಡ. ಕೂಡ್ಲುವಿನಲ್ಲಿ ಅಣ್ಣನಿಗೆ ಸೇರಿದ ಒಂದು ಎಕ್ರೆ ಭೂಮಿ ಇದ್ದು, ಆ ಸ್ಥಳದಲ್ಲಿಯೇ ಅಂತ್ಯಸಂಸ್ಕಾರ ಮಾಡುತ್ತೇವೆ. ಅಣ್ಣ ಹುಟ್ಟಿ ಬೆಳೆದ ಜಾಗದಲ್ಲೇ ಅಂತ್ಯ ಸಂಸ್ಕಾರ ಮಾಡಲು ನಾವು ಈಗಾಗಲೇ ನಿರ್ಧರಿಸಿದ್ದೇವೆ ಎಂದು ಹೇಳಿದರು.