ದಾವಣಗೆರೆ : ಕಾಂಗ್ರೆಸ್ ಅವಧಿಯಲ್ಲಿ ಪಿಎಸ್ಐ ಹಗರಣ ನಡೆದಿತ್ತು ಎಂದು ಬಿಜೆಪಿಯವರು ಹೇಳ್ತಾರೆ. ಅಂದು ವಿರೋಧ ಪಕ್ಷದಲ್ಲಿದ್ದ ಬಸವರಾಜ ಬೊಮ್ಮಾಯಿ ಅವರೇನು ಕಡ್ಲೆ ಪುರಿ ತಿನ್ನುತ್ತಿದ್ರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ಅಮೃತ್ ಪಾಲ್, ಮತ್ತೋರ್ವ ಅಧಿಕಾರಿ ಶಾಂತ್ ಕುಮಾರ್ ಅವರನ್ನು ಬಂಧಿಸಲಾಗಿದೆ. ತಪ್ಪು ಯಾರೂ ಮಾಡಿದರೂ ಅದು ತಪ್ಪೇ. ಅದು ಕಾಂಗ್ರೆಸ್ ಇರಲಿ, ಬಿಜೆಪಿಯವರೇ ಇರಲಿ. ಸರ್ಕಾರದ ಕುಮ್ಮಕ್ಕು ಇಲ್ಲದೆ ಪಿಎಸ್ಐ ಹಗರಣ ನಡಿಯೋಕೆ ಸಾಧ್ಯನೇ ಇಲ್ಲ. ಪಿಎಸ್ಐ ಹಗರಣದಲ್ಲಿ ಆರಗ ಜ್ಞಾನೇಂದ್ರ ಅವರು ಇದ್ದಾರೆ, ಆರಗ ಜ್ಞಾನೇಂದ್ರ ಗೃಹ ಮಂತ್ರಿ ಆಗುವ ಮುನ್ನ, ಹಿಂದಿನ ಗೃಹ ಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಅವರ ಅವಧಿಯಲ್ಲೇ ನೇಮಕಾತಿ ನಡೆದಿದೆ ಎಂದು ಆರೋಪಿಸಿದರು.
ಇದು ಸಿದ್ದರಾಮೋತ್ಸವ ಅಲ್ಲ, ಹೀಗೆ ಕರೆದವರು ಆರ್ ಎಸ್ ಎಸ್ ನವರು : ನನಗೆ 75 ವರ್ಷ ತುಂಬುವುದರಿಂದ ಇದೊಂದು ಮೈಲಿಗಲ್ಲು. ಇದರಿಂದ ಸ್ನೇಹಿತರು, ಅತ್ಮೀಯರು ಸೇರಿ ಅಮೃತೋತ್ಸವ ಮಾಡ್ತಾ ಇದ್ದಾರೆ. ಇದು ಸಿದ್ದರಾಮೋತ್ಸವ ಅಲ್ಲ, ಹೀಗೆ ಕರೆದವರು ಮಾಧ್ಯಮದವರು, ಆರ್ ಎಸ್ ಎಸ್ ನವರು. ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಬೆಂಬಲಿಗರು, ಸ್ನೇಹಿತರು ಸೇರಿ ಈ ಕಾರ್ಯಕ್ರಮವನ್ನು ಮಾಡ್ತಾ ಇದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಸಮಿತಿಯಲ್ಲಿ ಕೆ ಎನ್ ರಾಜಣ್ಣ ಅಧ್ಯಕ್ಷರಾಗಿದ್ದು, ಭೈರತಿ ಸುರೇಶ್ ಖಜಾಂಚಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
130 ಸೀಟ್ ಗೆದ್ದೇ ಗೆಲ್ಲುತ್ತೇವೆ : ವಿಧಾನಸಭೆ ಚುನಾವಣೆಗೆ 8 ತಿಂಗಳು ಬಾಕಿ ಇದೆ. ಮುಂದಿನ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು 130 ಸೀಟ್ ಗೆದ್ದು ಅಧಿಕಾರಕ್ಕೆ ಬರುತ್ತೇವೆ. 150 ಸೀಟ್ ಎಂದುಕೊಂಡಿದ್ದೇವೆ, 130 ಸೀಟ್ ಗೆದ್ದೇ ಗೆಲ್ಲುತ್ತೇವೆ. ಮುಂದಿನ ಸಿಎಂ ಯಾರು ಆಗುತ್ತಾರೆ ಎನ್ನುವುದು ಗೆದ್ದ ಶಾಸಕರಿಗೆ, ಹೈಕಮಾಂಡ್ ಗೆ ಬಿಟ್ಟದ್ದು. ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರು ಹೋಗುವುದಿಲ್ಲ ಎಂದು ಹೇಳಿದರು.
ಆರ್ ಎಸ್ ಎಸ್ ಅಳ ಮತ್ತು ಅಗಲ ಪುಸ್ತಕ ವಿಚಾರ : ದೇವನೂರು ಮಹಾದೇವ ನನ್ನ ಒಳ್ಳೆಯ ಗೆಳೆಯ. ಅವರೊಬ್ಬ ಸಾಹಿತಿ ತಮ್ಮ ಪುಸ್ತಕ ಬರೆದಿದ್ದಾರೆ. ನಾನೇಕೆ ಅವರಿಗೆ ಹೇಳಿ ಆರ್ ಎಸ್ ಎಸ್ ಪುಸ್ತಕ ಬರೆಸಲಿ ಎಂದು ಸಿದ್ದರಾಮಯ್ಯ ಕೇಳಿದ್ರು.
ಸಿದ್ದರಾಮಯ್ಯ ಉರೂಸ್ ಮಾಡಿಕೊಳ್ಳಲಿ ಎಂದು ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರು ವ್ಯಂಗ್ಯವಾಗಿ ಮಾತನಾಡುತ್ತಾರೆ, ಅದಕ್ಕೆ ನಾನು ಉತ್ತರ ಕೊಡೋಕೆ ಹೊಗೋದಿಲ್ಲ. ಬಿಜೆಪಿಯವರಿಗೆ ಈಗಾಗಲೇ ಭಯ ಶುರುವಾಗಿದೆ ಎಂದು ಹೇಳಿದರು.
ವಿಧಾಸಭೆ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆ ವಿಚಾರ : ವಿಧಾಸಭೆ ಚುನಾವಣೆಗೆ ಸ್ಪರ್ಧಿಸಲು ಬಾದಾಮಿ, ಕೋಲಾರ, ವರುಣ, ಮೈಸೂರಿನಲ್ಲಿ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ. ಬಾದಾಮಿಯವರು ಇಲ್ಲಿಂದಲೇ ಸ್ಪರ್ಧಿಸಿ ಎನ್ನುತ್ತಿದ್ದಾರೆ. ನಾನು ಈಗ ಬಾದಾಮಿ ಎಂಎಲ್ಎ, ಈಗಲೇ ಏನ್ ಹೇಳೋದಿಲ್ಲ. ಚುನಾವಣೆ ಬರಲಿ, ಆಮೇಲೆ ನಿರ್ಧಾರ ಮಾಡೋಣ ಎಂದು ತಿಳಿಸಿದರು.
ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡಿದ್ರೆ ಕಾಂಗ್ರೆಸ್ ಪಕ್ಷ ಎರಡು ಬಾಗ ಆಗುತ್ತೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಹೇಳಿಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಅದು ಅವರ ಭ್ರಮೆ, ಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಇದರಿಂದ ಮಾನಸಿಕ ಸ್ಥಮಿತ ಕಳೆದುಕೊಂಡಿದ್ದಾರೆ. ಆಗ ಮಾಡಿದ್ದು ಕುರುಬರ ಸಮಾವೇಶ, ಈಗ ಮಾಡ್ತಾ ಇರೋದು ಅಮೃತ ಮಹೋತ್ಸವ, ಇವತ್ತೇ ಚುನಾವಣೆಯಾದರೆ ನಾವು ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಸವಾಲು ಹಾಕಿದರು.
ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ : ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ಡಿ ಲಿಮಿಟೇಷನ್ ಇಲ್ಲ, ಕಮಿಷನ್ ಡೇಟಾ ಇಲ್ಲ. ಅವರು ಏನ್ ಮಾಡ್ತಾರೆ ಗೊತ್ತಿಲ್ಲ. ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಹಿಂದೂಳಿದವರಿಗೆ ಮೀಸಲಾತಿ ನೀಡದಿದ್ದರೆ ಅನ್ಯಾಯವಾಗುತ್ತದೆ. ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಬಂದ್ ಮಾಡಲಾಗಿದೆ. ಈ ಬಗ್ಗೆ ವಿಚಾರ ನಾನು ಏನು ಹೇಳೊಲ್ಲ, ನನಗೆ ಅದರ ಬಗ್ಗೆ ಗೊತ್ತಿಲ್ಲ ಎಂದರು.
ಓದಿ : 52 ನಿಗಮ ಮಂಡಳಿ ಅಧ್ಯಕ್ಷರ ನಾಮ ನಿರ್ದೇಶನ ರದ್ದು: ಬಿಎಸ್ವೈ, ವಿಜಯೇಂದ್ರ ಆಪ್ತರಿಗೆ ಶಾಕ್