ದಾವಣಗೆರೆ : ಜಿಲ್ಲೆಯ ಕೊಮಾರನಹಳ್ಳಿ ಕೆರೆಯ ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ. ಈ ಕೆರೆಗೆ ಹಾಗೂ ಇಲ್ಲಿನ ಕುರುಚಲು ಕಾಡಿಗೆ ವಿದೇಶಿ ಹಕ್ಕಿಗಳು ದಾಂಗುಡಿ ಇಡುತ್ತಿವೆ. ವಿಶೇಷವೆಂದರೆ, ಕೆರೆಯಲ್ಲಿ ನೀರು ನಾಯಿಗಳು ವಾಸಿಸುತ್ತಿದ್ದು, ಕೆರೆ ಮಧ್ಯೆ ಇರುವ ಐಲ್ಯಾಂಡ್ ಇದರ ವಾಸಸ್ಥಾನವಾಗಿದೆ. ಇಲ್ಲಿ ಬೆಳಗ್ಗೆ, ಸಂಜೆ ವೇಳೆಗೆ ಕೆರೆಯಲ್ಲಿ ವಿದೇಶಿ ಹಕ್ಕಿಗಳ ಕಲರವ ನೋಡೋಕೆ ಎರಡು ಕಣ್ಣುಗಳು ಸಾಲದು.
ಹರಿಹರ ತಾಲೂಕಿನ ಕೂಗಳತೆಯಲ್ಲಿರುವ ಕೊಮಾರನಹಳ್ಳಿ ಕೆರೆಗೆ ವಿದೇಶಿ ಹಕ್ಕಿಗಳು ವಲಸೆ ಬರುತ್ತಿವೆ. ಇಲ್ಲಿರುವ ಕುರುಚಲು ಕಾಡು, ಕೆರೆ, ವಿದೇಶಿ ಹಕ್ಕಿಗಳ ಕಲರವ, ಬೆಳಗ್ಗಿನ ದಟ್ಟ ಮಂಜು ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆಹಾರ ಅರಸಿ ಕೊಂಡಜ್ಜಿ ಕೆರೆಗೆ ಆಗಮಿಸುವ ವಿದೇಶಿ ಹಕ್ಕಿಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಈ ಕೆರೆ ಅಭಿವೃದ್ಧಿಯಾಗದೆ ಅವ್ಯವಸ್ಥೆಯ ತಾಣವಾಗಿದೆ. ಒಟ್ಟು 97 ಎಕರೆ 16 ಗುಂಟೆ ಪ್ರದೇಶದಲ್ಲಿರುವ ಕೆರೆ ಈ ಹಿಂದೆ ಹನಿ ನೀರಿಲ್ಲದೆ ಒಣಗಿ ಹೋಗಿತ್ತು. ಹರಿಹರ ತಾಲೂಕು ಆಡಳಿತ ಭದ್ರಾ ಕಾಲುವೆ ನೀರನ್ನು ಹಾಯಿಸಿ ಇಡೀ ಕೆರೆ ತುಂಬುವಂತೆ ಮಾಡಿ ವಿದೇಶಿ ಬಾನಡಿ ಸಂಕುಲ ಉಳಿಸಿದ್ದಾರೆ.
ಚಳಿಗಾಲ, ಬೇಸಿಗೆಗಾಲ ಸೇರಿದಂತೆ ಮಳೆಗಾಲದಲ್ಲೇ ಐವತ್ತಕ್ಕೂ ಹೆಚ್ಚು ಜಾತಿಯ ವಿದೇಶಿ ಹಕ್ಕಿಗಳು ಧಾವಿಸುತ್ತವೆ. ಈ ಕೆರೆ ಏರಿ ಮೇಲೆ ಹಾದು ಹೋಗಿರುವ ಶಿವಮೊಗ್ಗ ಮತ್ತು ದಾವಣಗೆರೆ ಮುಖ್ಯ ರಸ್ತೆಯಲ್ಲಿ ಪ್ರಯಾಣ ಬೆಳೆಸುವ ಪ್ರವಾಣಿಕರು ತಮ್ಮ ವಾಹನಗಳನ್ನು ತರುಬಿ ವಿದೇಶಿ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳುತ್ತಾರೆ. ಈ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾಡಬೇಕೆಂದು ಹಕ್ಕಿಗಳ ಪ್ರೇಮಿ ಪರಮೇಶ್ ಒತ್ತಾಯಿಸಿದರು.
ಕೊಮಾರನಹಳ್ಳಿ ಕೆರೆಗೆ ಒಟ್ಟು 52 ಕ್ಕು ಹೆಚ್ಚು ಪ್ರಭೇದದ ವಿದೇಶಿ ಹಕ್ಕಿಗಳು ವಲಸೆ ಬರುತ್ತಿದ್ದು, ಬಿಳಿ ಹುಬ್ಬಿನ ಬಾತು, ಸೂಜಿಬಾಲದ ಬಾತು, ಕಂದು ಬಾತು, ಗುಬುಟ ಕೊಕ್ಕಿನ ಬಾತು, ರಫ್ ಮಿಗ್ರಾಂನಟ್ಸ್ ಹೆಬ್ಬು ತಲೆ ಹೆಬ್ಬಾತು, ನವರಂಗ, ಮರಳು ಪೀಪಿಗಳು, ರೆಡ್ ಹೆಡೇಡ್ ಬಂಟಿಂಗ್‌ಗಳನ್ನು ಇಲ್ಲಿ ನೋಡಬಹುದು. ಈ ಎಲ್ಲಾ ಹಕ್ಕಿಗಳು ಮಂಗೋಲಿಯಾ, ಯುರೋಪಿಯನ್ ದೇಶಗಳು ಹಾಗು ಹಿಮಾಲಯ ಪ್ರದೇಶದಿಂದಲೂ ವಲಸೆ ಬರುತ್ತಿವೆ.
ಇಲ್ಲಿ ಕುರುಚಲು ಕಾಡು, ನೀರು, ಹೊಲಗದ್ದೆಗಳಿರುವ ಕಾರಣ ಆಹಾರ ಅರಸಿ ಈ ಹಕ್ಕಿಗಳು ಬೇಸಿಗೆ ಮತ್ತು ಚಳಿಗಾಲದಲ್ಲಿ ಹೆಚ್ಚು ಆಗಮಿಸುತ್ತಿವೆ. ಈಗಾಗಲೇ ಕಾಲುವೆ ನೀರನ್ನು ಹರಿಸಲಾಗಿದ್ದು, ಹೊಳೆಯಿಂದಲೂ ನೀರು ಹಾಯಿಸಲು ಸಿದ್ಧತೆ ನಡೆದಿದೆ. ವಲಸೆ ಬರುವ ಪಕ್ಷಿಗಳಿಗೆ ನೀರು ಆಸರೆಯಾಗಲಿದೆ. ಇದಲ್ಲದೆ ನೀರು ನಾಯಿಗಳೀಗೂ ಕೆರೆ ವಾಸಸ್ಥಾನವಾಗಿದೆ ಎಂದು ಸ್ಥಳೀಯರಾದ ಮಂಜಪ್ಪ ಮಾಹಿತಿ ನೀಡಿದರು.
ಯುವಕರ ಮೋಜು, ಮಸ್ತಿಯಿದ ಜೀವ ವೈವಿಧ್ಯತೆಗೆ ಧಕ್ಕೆ: ರಮಣೀಯ ತಾಣವಾಗಿರುವ ಕೊಮಾರನಹಳ್ಳಿ ಕೆರೆ ರಸ್ತೆ ಭಾಗದಲ್ಲಿದ್ದು ಯುವಕರ ಪಾರ್ಟಿ ಹಾಗೂ ಮೋಜು ಮಸ್ತಿಯಿಂದ ಜೀವವೈವಿಧ್ಯತೆಗೆ ಧಕ್ಕೆಯಾಗುತ್ತಿದೆ. ಇಲ್ಲಿ ಪಾರ್ಟಿ ಮಾಡುವ ಯುವಕರು ಸಾಕಷ್ಟು ಗಲೀಜು ಮಾಡಿ, ಕುಡಿದ ಮದ್ಯದ ಬಾಟಲಿಗಳನ್ನು ಒಡೆಯುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಮಾತ್ರ ಮೌನವಾಗಿರುವುದು ಪ್ರವಾಸಿಗರು ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.
ಇದನ್ನೂ ಓದಿ :ಎಲ್ಲ ರಾಷ್ಟ್ರೀಯ ಉದ್ಯಾನದ ಬಾಗಿಲು ತೆರವು: ದೇಶ ವಿದೇಶಿ ಪರಿಸರ ಪ್ರೇಮಿಗಳಿಗೆ ಖುಷಿ