ದಾವಣಗೆರೆ: ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ತುಂಗಾಭದ್ರ ನದಿ ಭೋರ್ಗರೆಯುತ್ತಿದ್ದು, ಅಪಾರ ಪ್ರಮಾಣದ ನೀರಿನಿಂದ ನದಿ ತುಂಬಿ ಹರಿಯುತ್ತಿದೆ. ತುಂಗಾಭದ್ರ ನದಿಯಲ್ಲಿ ನೀರು ದಿನೇ ದಿನೆ ಹೆಚ್ಚಾದಂತೆ ದಾವಣಗೆರೆಯ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪ್ರವಾಹ ಸೃಷ್ಟಿಯಾಗುವ ಹಂತ ತಲುಪಿದೆ.
ತುಂಗಭದ್ರಾ ನದಿ ಭೋರ್ಗರೆಯುತ್ತಿರುವುದರಿಂದ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯ ಕೆಲ ಭಾಗ ಮುಳುಗಿದ್ದು, ಆ ಭಾಗದಲ್ಲಿ ಯಾರು ಜನ ತೆರಳದಂತೆ ತಾಲೂಕು ಆಡಳಿತ ಸೂಚಿಸಿದೆ. ಇದಲ್ಲದೆ ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟ, ಜವಳಘಟ್ಟ ಸೇರಿ ಹದಿನೈದು ಅಂಗಡಿಗಳು ಈಗಾಗಲೇ ಜಲಾವೃತವಾಗಿವೆ.
ರಸ್ತೆ ಸಂಪೂರ್ಣ ಮುಳುಗಡೆ: ನದಿ ದಂಡೆಯಲ್ಲಿದ್ದ ಗಣೇಶನ ದೇವಾಲಯ ಮುಳುಗಿದ್ದರಿಂದ ನೀರಿನ ಸೆಳೆತ ಹೆಚ್ಚಾಗಿದೆ. ಪರಿಣಾಮ ಭಕ್ತರು ಅಲ್ಲಿಗೆ ತೆರಳದಂತೆ ದೇವಾಲಯದ ಕಮಿಟಿಯಿಂದ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇನ್ನು ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ಕಡೆಯಿಂದ ಉಕ್ಕಡಗಾತ್ರಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಹೀಗಾಗಿ, ಉಕ್ಕಡಗಾತ್ರಿ ಶ್ರೀ ಕ್ಷೇತ್ರಕ್ಕೆ ಬರಬೇಕು ಎಂದರೆ ಸುತ್ತುಹಾಕಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
'ಹದಿನೈದು ಅಡಿಯಷ್ಟು ನೀರು ನದಿಗೆ ಬಂದ್ರೆ ಶ್ರೀ ಕ್ಷೇತ್ರ ಜಲಾವೃತ ಆಗಲಿದೆ. ಈಗಾಗಲೇ ಈ ನದಿ ನೀರಿನಿಂದ ತಿಮ್ಮನಕಟ್ಟೆ ರಸ್ತೆ, ಫತೇಪುರ್ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಅಂಗಡಿಗಳಿಗೆ ನೀರು ನುಗ್ಗಿದೆ. ಹದಿನೈದು ದಿನಗಳಿಂದ ಅಂಗಡಿ ಬಂದ್ ಆಗಿವೆ' ಎಂದು ಗ್ರಾಮಸ್ಥರಾದ ಗಜೇಂದ್ರಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಂಕಷ್ಟ ಕಟ್ಟಿಟ್ಟ ಬುತ್ತಿ : 'ತುಂಗಭದ್ರಾ ನದಿಯಲ್ಲಿ ಪ್ರಸ್ತುತವಾಗಿ 9.68 ಮೀಟರ್ ನಷ್ಟು ನೀರು ಹರಿಯುತ್ತಿದ್ದು, ಇನ್ನು 10 ಮೀಟರ್ಗಿಂತ ಹೆಚ್ಚು ನೀರು ನದಿಯಲ್ಲಿ ಬಂದರೆ ಪ್ರವಾಹ ಹೆಚ್ಚಾಗುವ ಭೀತಿಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಮಳೆಯಿಂದ ಹದಿನೈದು ಅಂಗಡಿಗಳು ಕೊಚ್ಚಿಕೊಂಡು ಹೋಗಿದ್ದು, ಅಂಗಡಿ ಮಾಲೀಕರಿಗೆ ದಿಕ್ಕು ತೋಚದಂತಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ನದಿಯಲ್ಲಿ ಸ್ನಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಳೆಗಾಲದಲ್ಲಿ ನದಿಯಲ್ಲಿ ನೀರು ಹೆಚ್ಚಾದರೆ ಶ್ರೀ ಕ್ಷೇತ್ರಕ್ಕೆ ಹಾಗೂ ಅಂಗಡಿ ಮಾಲೀಕರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ' ಅಂಗಡಿ ಮಾಲೀಕ ಶಂಕರ್.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಹರಿಹರ ತಹಶೀಲ್ದಾರ್ ಅಶ್ವತ್ಥ ಅವರು ಉಕ್ಕಡಗಾತ್ರಿಗೆ ಭೇಟಿ ನೀಡಿ, ಯಾರು ನದಿಗೆ ಇಳಿಯದಂತೆ ತಾಕೀತು ಮಾಡಿದ್ದಾರೆ.
ಓದಿ: ನಾನು ಟಿಕೆಟ್ ಕೊಡದಿದ್ದರೇ ಸುಧಾಕರ್ ಈಗ ಮಂತ್ರಿ ಆಗ್ತಿದ್ರಾ?: ಸಿದ್ದರಾಮಯ್ಯ ಪ್ರಶ್ನೆ