ದಾವಣಗೆರೆ: ದಾವಣಗೆರೆ ಗ್ರಾಮಾಂತರ ಠಾಣೆಯ ವಿಶ್ರಾಂತಿ ಕೊಠಡಿಯಲ್ಲಿ ಜೂಜಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಐವರು ಪೊಲೀಸ್ ಕಾನ್ಸ್ಸ್ಟೇಬಲ್ ಹಾಗೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪಿಎಸ್ಐ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ದಾವಣಗೆರೆ ಗ್ರಾಮಾಂತರ ಠಾಣೆಯ ಪಿಎಸ್ಐ ಸಂಜೀವ್ ಕುಮಾರ್, ಸಿಇಎನ್ ಪೊಲೀಸ್ ಠಾಣೆಯ ಎಸ್. ಲೋಹಿತ್, ನಾಗರಾಜ್, ಹಲುವಾಗಲು ಪೊಲೀಸ್ ಠಾಣೆಯ ಬಾಲರಾಜ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಮಹೇಶ್ ಹಾಗೂ ಮಾಯಕೊಂಡ ಪೊಲೀಸ್ ಠಾಣೆಯ ಮಂಜಪ್ಪ ಅಮಾನತುಗೊಂಡ ಪೊಲೀಸ್ ಕಾನ್ಸ್ಟೇಬಲ್ಗಳಾಗಿದ್ದಾರೆ.
ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಹಿಂಭಾಗದ ಕೊಠಡಿಯೊಂದರಲ್ಲಿ ಪೊಲೀಸ್ ಕಾನ್ಸ್ಸ್ಟೇಬಲ್ಗಳು ಜೂಜಾಡುತ್ತಿದ್ದ ಮಾಹಿತಿ ಸಿಕ್ಕಿದ್ದ ಹಿನ್ನೆಲೆಯಲ್ಲಿ ಪೂರ್ವ ವಲಯ ಐಜಿಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ.ಜೆ. ತಿರುಮಲೇಶ್ ನೇತೃತ್ವದ ಐಜಿ ಸ್ಕ್ವ್ಯಾಡ್ ದಾಳಿ ನಡೆಸಿದೆ. ಈ ವೇಳೆ ಜೂಜಾಟಕ್ಕೆ ಬಳಸಿದ್ದ 29 ಸಾವಿರ ರೂಪಾಯಿ ನಗದು, ಇಸ್ಪೀಟ್ ಎಲೆಗಳು, ಐವರು ಪೊಲೀಸ್ ಸಿಬ್ಬಂದಿಯನ್ನ ವಶಕ್ಕೆ ಪಡೆಯಲಾಗಿತ್ತು.
ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿಯೇ ಪೊಲೀಸ್ ಸಿಬ್ಬಂದಿ ಇಸ್ಪೀಟ್ ಆಡುತ್ತಿದ್ದರೂ ಗಮನಿಸದಿರುವ ಕಾರಣ ಕರ್ತವ್ಯ ಲೋಪದ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸಂಜೀವ್ ಕುಮಾರ್ ಅವರನ್ನು ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರು ಅಮಾನತು ಮಾಡಿ ಆದೇಶಿಸಿದ್ದಾರೆ. ಪೊಲೀಸ್ ಅಧೀಕ್ಷಕರು, ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತಿನಲ್ಲಿಟ್ಟು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಡಿವೈಎಸ್ಪಿ ಅವರಿಗೆ ಸೂಚನೆ ನೀಡಲಾಗಿದೆ.
ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಯಾವುದೇ ಕಾನೂನುಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಇಂತಹ ಪ್ರಕರಣ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುವಂತೆ ಐಜಿಪಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಹಾಗೂ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.
ಲಾಕ್ಡೌನ್ ವೇಳೆಯಲ್ಲಿ ಇಸ್ಪೀಟ್ ಆಡುವಾಗ ಶಿಕ್ಷಣ ಇಲಾಖೆಯ ಏಳು ಸಿಬ್ಬಂದಿ ಸಿಕ್ಕಿಬಿದ್ದು ಸಸ್ಪೆಂಡ್ ಆಗಿದ್ದರು. ಈ ಘಟನೆ ಮಾಸುವ ಮುನ್ನವೇ ಪೊಲೀಸರೇ ಇಸ್ಪೀಟ್ ಆಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಕೊರೊನಾ ನಿಯಂತ್ರಣ ವೇಳೆಯಲ್ಲಿ ಹಗಲು-ರಾತ್ರಿ ಕೆಲಸ ಮಾಡಿದ್ದ ಪೊಲೀಸ್ ಇಲಾಖೆಗೆ ಈ ಪ್ರಕರಣ ಮುಜುಗರ ತರುವಂತೆ ಮಾಡಿದೆ.