ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವತಿಯರ ನಡುವೆ ಜಗಳವಾಗಿ, ಅದು ಹಲ್ಲೆ ಮಾಡುವ ಹಂತಕ್ಕೆ ತಲುಪಿರುವ ಘಟನೆ ಇಲ್ಲಿನ ಶಾಂತಿ ನಗರದಲ್ಲಿ ನಡೆದಿದೆ. ಅದರೆ, ಈ ಘಟನೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ರಸ್ತೆಯಲ್ಲೇ ಯುವತಿಯೊಬ್ಬಳಿಗೆ ಮತ್ತೋರ್ವ ಯುವತಿಯು ರೇಡಿಯಂ ಕಟರ್‌ನಿಂದ ಕೊಯ್ದು ಗಂಭೀರ ಗಾಯ ಮಾಡಿದ್ದು, ಗಲಾಟೆಗೆ ಕಾರಣ ತಿಳಿದು ಬಂದಿಲ್ಲ. ದಾವಣಗೆರೆಯ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಈ ಇಬ್ಬರು ಯುವತಿಯರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಆಗ ಕುತ್ತಿಗೆ, ಕೆನ್ನೆ ಹಾಗೂ ಕೈಗೆ ರೇಡಿಯಂ ಕಟರ್‌ನಿಂದ ಹಲ್ಲೆ ಮಾಡಿಕೊಂಡಿದ್ದಾರೆ.
ಹಲ್ಲೆಗೊಳಗಾದ ಯುವತಿ ಹಾಗೂ ಹಲ್ಲೆ ಮಾಡಿದ ಯುವತಿಗೂ ಸಹ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದ್ದು, ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ತನಿಖೆ ಬಳಿಕ ಘಟನೆಗೆ ಕಾರಣ ತಿಳಿದುಬರಲಿದೆ.
ಯುವತಿಯರಿಬ್ಬರ ಈ ಗಲಾಟೆಯಿಂದ ಶಾಂತಿನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ರೇಡಿಯಂ ಕಟರ್‌ನಿಂದ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇವರನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆಯಿಂದ ಯುವತಿಯರ ಕುಟುಂಬಸ್ಥರು ಒಂದು ಕ್ಷಣ ದಂಗಾಗಿದ್ದು, ಘಟನೆ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ಹಾಗೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಅರಣ್ಯ ಇಲಾಖೆ ಶೌಚಾಲಯದಲ್ಲಿ ವ್ಯಕ್ತಿಯ ಶವ, ಲಾಕಪ್ ಡೆತ್ ಆರೋಪ