ದಾವಣಗೆರೆ: ಸಾಲಬಾಧೆ ತಾಳಲಾರದೆ ರೈತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ನಡೆದಿದೆ.
24 ವರ್ಷದ ಶ್ವೇತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಶ್ವೇತಾ ಅವರ ಪತಿ ಮಹೇಶ್ವರಪ್ಪ ವಿವಿಧ ಬ್ಯಾಂಕ್ ಹಾಗೂ ಕೈಗಡವಾಗಿ ಸುಮಾರು 5 ಲಕ್ಷ ರೂ.ಗೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಅದನ್ನು ವಾಪಸ್ ನೀಡುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಶ್ವೇತಾ, ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೊನ್ನಾಳಿ ಸಿಪಿಐ ಟಿ.ವಿ.ದೇವರಾಜ್, ನ್ಯಾಮತಿ ತಹಶೀಲ್ದಾರ್ ತನುಜಾ ಟಿ. ಸವದತ್ತಿ, ಸಬ್ ಇನ್ಸ್ಪೆಕ್ಟರ್ ಹನುಮಂತಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.