ದಾವಣಗೆರೆ: ಪಿಕ್ನಿಕ್ಗೆ ಎಂದು ತೆರಳಿದ್ದ ತಂದೆ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನಲ್ಲಿ ನಡೆದಿದೆ. ಮಿಟ್ಲಕಟ್ಟೆ ಗ್ರಾಮದ ಚಂದ್ರು (42), ಶೌರ್ಯ(9) ಮೃತಪಟ್ಟ ದುರ್ದೈವಿಗಳು ಎಂಬುದಾಗಿ ತಿಳಿದು ಬಂದಿದೆ.
ರಜೆ ಹಿನ್ನೆಲೆಯಲ್ಲಿ ಡ್ಯಾಂ ನೋಡಲು ತೆರಳಿದ್ದಾಗ ಅವಘಡ ಸಂಭವಿಸಿದೆ. ಮೃತ ಚಂದ್ರು ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಡ್ಯಾಂ ನೋಡಲು ತೆರಳಿದ್ದರು. ಈ ವೇಳೆ ಅವರ ಇಬ್ಬರು ಮಕ್ಕಳು ಈಜುವುದಕ್ಕಾಗಿ ನೀರಿಗೆ ಇಳಿದಿದ್ದಾರೆ. ಇಬ್ಬರು ಪುತ್ರರು ಈಜುತ್ತಾ ನೀರಿನ ಸುಳಿಗೆ ಸಿಲುಕಿದ್ದಾರೆ. ಇದನ್ನು ಗಮನಿಸಿದ ತಂದೆ ಚಂದ್ರು ಹರಸಾಹಸಪಟ್ಟು ಒಬ್ಬ ಪುತ್ರನನ್ನು ದಡಕ್ಕೆ ತಂದು ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ತಂದೆ ಚಂದ್ರು ಇನ್ನೊಬ್ಬ ಪುತ್ರನನ್ನು ಕಾಪಾಡಲು ತೆರಳಿದಾಗ ನೀರಿನ ಸುಳಿಗೆ ಸಿಲುಕಿದ ಪುತ್ರ ಶೌರ್ಯನನ್ನು ದಡಕ್ಕೆ ಕರೆತರುವಲ್ಲಿ ವಿಫಲರಾಗಿದ್ದಾರೆ. ಇವರು ಕೂಡ ನೀರಿನ ಸುಳಿಗೆ ಸಿಲುಕಿ ಅಸ್ವಸ್ಥರಾಗಿದ್ದರು. ಅಸ್ವಸ್ಥರಾಗಿದ್ದ ಚಂದ್ರು ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇನ್ನು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದ ಪುತ್ರ ಶೌರ್ಯನ ಶವಕ್ಕಾಗಿ ಡ್ಯಾಂನಲ್ಲಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿ ಶವವನ್ನು ಹೊರ ತರುವಲ್ಲಿ ಯಶಸ್ಬಿಯಾಗಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ವಿಚಾರ ತಿಳಿದು ಜನ ಸಾಗರವೇ ದೇವರ ಬೆಳಕೆರೆ ಪಿಕಪ್ ಡ್ಯಾಂ ಬಳಿ ಹರಿದು ಬಂದಿತ್ತು. ಕುಟುಂಬದಲ್ಲಿ ಇಬ್ಬರು ಸಾವನ್ನಪ್ಪಿದ್ದರಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇಬ್ಬರು ಬಾಲಕಿಯರು ಮುಳುಗಿ ಸಾವು : ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕಿಯರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಫುಲ್ದರ್ವಾಡಿ ಗ್ರಾಮದಲ್ಲಿ (ಆಗಸ್ಟ್- 31-2023) ನಡೆದಿತ್ತು. ಸಕ್ಕುಬಾಯಿ ಸುರೇಶ (16), ಚಾಂದನಿ ಬಾಬುರಾವ್ (16) ಮೃತರು ಎಂಬುದಾಗಿ ತಿಳಿದು ಬಂದಿತ್ತು. ಕೆರೆಯಿಂದ ಇಬ್ಬರ ಮೃತ ದೇಹಗಳನ್ನು ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
10ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿಯರು, ಗ್ರಾಮದ ಬಳಿಯ ಕೆರೆಯಲ್ಲಿ ಬಟ್ಟೆ ತೊಳೆದು ನಂತರ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿತ್ತು. ವಿಷಯ ತಿಳಿದು ಸ್ಥಳೀಯರು ನೀರಿಗೆ ಧುಮುಕಿದರೂ ಈ ಇಬ್ಬರು ಬಾಲಕಿಯರನ್ನು ಉಳಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕಿಯರು ಮುಳುಗಿ ಸಾವು