ದಾವಣಗೆರೆ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಮಾಯಕೊಂಡದಲ್ಲಿ ರೈತರು ದನ-ಕರು ಹಾಗೂ ಕುರಿ ತಂದು ಪ್ರತಿಭಟನೆ ನಡೆಸಿದರು.
ಮಾಯಕೊಂಡದ ನಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸದೇ ರೈತರನ್ನು ಶೋಷಿಸುತ್ತಿವೆ. ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳಿಗೆ ದರ ನಿಗದಿ ಮಾಡಿದೆ. ಅದಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡುವಂತಿಲ್ಲ. ಆದರೂ ಕೆಲ ದಲ್ಲಾಳಿಗಳು ರೈತರ ಸಂಕಷ್ಟ ಬಳಸಿಕೊಂಡು ಕಡಿಮೆ ದರ ಪಡೆದು ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆಕ್ಕೆಜೋಳ ಕ್ವಿಂಟಾಲ್‌ಗೆ 1,850 ರೂಪಾಯಿ ದರ ನಿಗದಿಪಡಿಸಿದೆ. ಆದರೆ 1,100 ರೂಪಾಯಿಗೆ ಮೆಕ್ಕೆಜೋಳ ಕೇಳುವವರಿಲ್ಲ. 22 ದಿನ ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ರೈತರು ಬೆಳೆದ ಬೆಳೆ, ಸೂಕ್ತ ಬೆಲೆ ಸಿಗದ ಕಾರಣ ದನ, ಕರುಗಳ ಸಾಕಾಣಿಕೆ ಕಷ್ಟವಾಗುತ್ತಿದೆ. ಆದ್ದರಿಂದ ದನ, ಕರುಗಳನ್ನು ತಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ. ನಾವು ದನ, ಕರುಗಳಿಂದ ಜೈಲ್ ಭರೋ ನಡೆಸುತ್ತಿದ್ದೇವೆ. ಬಂಧನ ಮಾಡಿದರೂ ಹೆದರುವುದಿಲ್ಲ. ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.