ದಾವಣಗೆರೆ: ಭೂ ಸುಧಾರಣೆ ತಿದ್ದುಪಡಿ ಸೇರಿದಂತೆ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಡಿಸೆಂಬರ್ 7 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರಾಜ್ಯ ರೈತ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ನಗರದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ರೈತ ವಿರೋಧಿ ನೀತಿಗಳ ವಿರುದ್ಧ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಆಗಬೇಕಿದ್ದು, ಸಂಘಟಿತ ಹೋರಾಟ ಅಗತ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬದುಕು ಕಸಿದುಕೊಳ್ಳುತ್ತಿವೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಈಗಾಗಲೇ ಹೋರಾಟ ನಡೆಸಿದ್ದೇವೆ. ಇನ್ನು ಪ್ರಬಲವಾಗಿ ಒಟ್ಟಾಗಿ ಹೋರಾಡುವ ಅಗತ್ಯ ಇದೆ. ಪ್ರತಿಯೊಬ್ಬ ರೈತರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾದ ಅಗತ್ಯತೆ ಇದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ರೈತ ಉತ್ಪನ್ನಗಳ ಖರೀದಿ ಕೇಂದ್ರ ಆರಂಭಿಸಬೇಕು. ಮೆಕ್ಕೆಜೋಳ, ಭತ್ತ ಸೇರಿದಂತೆ ಬೆಳೆಗಳ ಖರೀದಿ ಕೇಂದ್ರ ಪ್ರಾರಂಭಿಸುವವರೆಗೂ ಹೋರಾಡೋಣ ಎಂದು ಕೋಡಿ ಹಳ್ಳಿ ಚಂದ್ರಶೇಖರ್ ಕರೆ ನೀಡಿದರು.
ನವದೆಹಲಿಯಲ್ಲಿ ನವೆಂಬರ್ 26, 27ಕ್ಕೆ ಪ್ರೊಟೆಸ್ಟ್:
ಕೇಂದ್ರ ಸರ್ಕಾರದ ಎಪಿಎಂಸಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ವಿರೋಧಿಸಿ ನವದೆಹಲಿಯಲ್ಲಿ ನವೆಂಬರ್ 26 ಹಾಗೂ 27 ರಂದು ದೇಶದ 250 ಸಂಘಟನೆಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು. 26ರಂದು ರಾಮಲೀಲಾ ಮೈದಾನದಲ್ಲಿ ಧರಣಿ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಂಸತ್ ಎದುರು 27ರಂದು ಪ್ರತಿಭಟನೆ ನಡೆಸಲಾಗುವುದು. ರಾಜ್ಯದ ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳು ಭವಿಷ್ಯದಲ್ಲಿ ಮಾರಕವಾಗಲಿವೆ. ಕಾರ್ಪೊರೇಟ್, ಎಂಎನ್ ಸಿ ಕಂಪನಿಗಳ ಪರವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾವುದೇ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಇರದಿದ್ದರೆ ಏಕಾಏಕಿ ಜಾಸ್ತಿಯಾಗುತ್ತದೆ. ಕಳೆದ ಕೆಲ ದಿನಗಳ ಹಿಂದೆ ಈರುಳ್ಳಿ, ತೊಗರಿ ಬೆಳೆ ದರ ಹೆಚ್ಚಾಗಲು ಇದೇ ಕಾರಣ. ಮಾರುಕಟ್ಟೆ ಕಾರ್ಪೊರೇಟ್ ಕಂಪನಿಗಳ ಹಿಡಿತಕ್ಕೆ ಹೋದರೆ ರೈತರ ಬದುಕು ಮೂರಾಬಟ್ಟೆ ಆಗಲಿದೆ ಎಂದ ಅವರು, ಯಾವುದೇ ಕಾರಣಕ್ಕೆ ರೈತರು ತುಂಡು ಭೂಮಿಯನ್ನು ನೀಡಬಾರದು. ಎಷ್ಟೇ ಕಷ್ಟ ಬಂದರೂ ಜಮೀನು ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.