ದಾವಣಗೆರೆ: ಆತ ಬಡ ರೈತ, ಇದ್ದ ಎರಡು ಎಕರೆ ಜಮೀನಿನಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದ್ರೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಇದ್ದ ಎರಡು 2 ಎಕರೆಯಲ್ಲಿ ಒಂದೂವರೆ ಎಕರೆ ಜಮೀನು ಕಳೆದುಕೊಂಡು ನೋವುಂಡ ಅನ್ನದಾತನಿಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ.
ಜಿಲ್ಲೆಯ ಹರಿಹರದ ತುಂಗಭದ್ರಾ ನದಿಯಿಂದ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ 48 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರು ಇರುವ ತುಂಡು ಭೂಮಿಯನ್ನು ಕಳೆದುಕೊಳ್ಳಲಿದ್ದಾರೆಯೇ ಎಂಬ ಆತಂಕ ಮೂಡಿದೆ.
ಹೌದು, ದಾವಣಗೆರೆಯ ಶಾಮನೂರು ಬಳಿ ಈಗಾಗಲೇ 48 ಕೆರೆಗಳಿಗೆ ನೀರು ತುಂಬಿಸುವ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಶಾಮನೂರಿನ ರೈತ ರಾಮಚಂದ್ರಪ್ಪ ಅವರಿಗೆ ಇರುವ ಅರ್ಧ ಎಕರೆ ಜಮೀನಿನಲ್ಲಿ ಅಧಿಕಾರಿಗಳು ಹೇಳದೆ ಕೇಳದೆ ಕಾಮಗಾರಿ ಆರಂಭಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಮಚಂದ್ರಪ್ಪ ಅವರ 6 ರಿಂದ 7 ಗುಂಟೆ ಜಮೀನು ಒತ್ತುವರಿಯಾಗಿದ್ದು, ಪರಿಹಾರ ನೀಡುವಂತೆ ರೈತ ಪಟ್ಟು ಹಿಡಿದು ಕುಳಿತಿದ್ದಾರೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿಗೆ ಒಂದೂವರೆ ಎಕರೆ ಜಮೀನು ನೀಡಿ ಹೈರಾಣಾಗಿರುವ ರೈತನ ಕುಟುಂಬಕ್ಕೆ ಇದೀಗ ಇದ್ದ ಅರ್ಧ ಎಕರೆಯಲ್ಲಿ 6 ಗುಂಟೆ ಪೈಪ್ ಲೈನ್ ಕಾಮಗಾರಿಗೆ ಒತ್ತುವರಿಯಾಗಿರುವುದರಿಂದ ದಿಕ್ಕುತೋಚದಂತಾಗಿದೆ.
ಈ ಕುರಿತು ಸ್ಥಳಕ್ಕೆ ನೀರಾವರಿ ನಿಗಮ ಎಂಡಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ನೀಡುವುದಾಗಿ ತಿಳಿಸಿದ್ದಾರಂತೆ. ಅದ್ರೆ ಕಾಮಗಾರಿ ಆರಂಭವಾಗಿ ಸಾಕಷ್ಟು ದಿನ ಕಳೆದರೂ ಕೂಡ ಯಾವುದೇ ಪರಿಹಾರ ಸಿಗದಿರುವುದರಿಂದ ರೈತನ ಕುಟುಂಬ ಕಣ್ಣೀರಿಡುತ್ತಿದೆ.