ದಾವಣಗೆರೆ : ಈ ಬಾರಿ ಗುಲಾಬಿ ಹೂವಿನಿಂದ ಲಾಭ ಗಳಿಸುವ ವಿಶ್ವಾಸದಲ್ಲಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ. ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ನಿಂದಾಗಿ ಗುಲಾಬಿ ಖರೀದಿ ಮಾಡುವವರೇ ಇಲ್ಲದಂತಾಗಿದೆ. ಬೆಳೆದಿದ್ದ ಹೂವನ್ನು ರೈತರು ನಾಶಪಡಿಸುವ ದುಸ್ಥಿತಿ ಎದುರಾಗಿದೆ.
ಮದುವೆ, ಶುಭ ಕಾರ್ಯಕ್ರಮಗಳು, ದೇವಸ್ಥಾನಗಳು ಬಂದ್ ಆಗಿರುವ ಕಾರಣಕ್ಕೆ ಗುಲಾಬಿ ಹೂವು ಕೇಳುವವರೇ ಇಲ್ಲ. ಇದರಿಂದ ಕಂಗೆಟ್ಟ ಜಿಲ್ಲೆಯ ರೈತ ನಾಗರಾಜ್ ಆಚಾರ್ ನ್ಯಾಮತಿ ಎಂಬ ರೈತ ತಾವು ಬೆಳೆದಿದ್ದ ಗುಲಾಬಿ ಹೂವನ್ನು ನಾಶಪಡಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಗುಲಾಬಿ ಹೂವು ಬೆಳೆಯುತ್ತಿದ್ದರು. ಆದರೆ, ಈ ಬಾರಿ ಬೆಳೆ ಚೆನ್ನಾಗಿ ಬಂದರೂ ಕೊರೊನಾ ಭೀತಿಯಿಂದ ಬೆಳೆಗಾರರು ತಲೆಮೇಲೆ ಕೈಹೊತ್ತುಕೊಳ್ಳುವಂತಾಗಿದೆ.
ಲಾಕ್ಡೌನ್ ಹಿನ್ನೆಲೆ ವಾಹನಗಳ ಸಾಗಣೆ ಇಲ್ಲವಾಗಿದೆ. ರಾಜ್ಯ ಸರ್ಕಾರ ನೇರವಾಗಿ ರೈತರ ಜಮೀನಿನಿಂದ ಖರೀದಿಸುವುದಾಗಿ ಹೇಳಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಒಂದೆಡೆ ಮಾರ್ಕೆಟ್ ಇಲ್ಲ, ಮತ್ತೊಂದೆಡೆ ಬೆಳೆದ ಗುಲಾಬಿ ಎಲ್ಲಿಗೆ ತೆಗೆದುಕೊಂಡು ಹೋಗಬೇಕೆಂಬುದು ಗೊತ್ತಾಗದ ಕಾರಣ ನಾಗರಾಜ್ ಆಚಾರ್ ಕುರಿಗಳ ಹಿಂಡು ಬಿಟ್ಟು ನಾಶ ಪಡಿಸಿದ್ದಾರೆ.