ದಾವಣಗೆರೆ: ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕಾಗಿ ಖದೀಮರು ಬೇಡಿಕೆ ಇಡುತ್ತಿರುವ ಪ್ರಕರಣಗಳು ರಾಜ್ಯಾದ್ಯಂತ ಮರುಕಳಿಸುತ್ತಿವೆ. ಇಂತಹ ಪ್ರಕರಣಗಳಲ್ಲಿ ಸಾಕಷ್ಟು ಜನ ಕೂಡ ಆನ್ಲೈನ್ ಮೂಲಕ ಹಣ ನೀಡಿ ಮೋಸ ಹೋಗಿದ್ದಾರೆ. ಇದೀಗ ಪೊಲೀಸರ ಹೆಸರಲ್ಲೇ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

'ಎಸ್ಪಿ ದಾವಣಗೆರೆ' ಎಂಬ ಹೆಸರಿನಲ್ಲಿ ನಕಲಿ ಅಕೌಂಟ್ ಖಾತೆ ಮಾಡಿ ವಂಚನೆಗೆ ಖದೀಮರು ಮುಂದಾಗಿದ್ದು, ಯಾರು ಕೂಡ ಮೋಸಕ್ಕೆ ಓಳಗಾಗಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮನವಿ ಮಾಡಿದ್ದಾರೆ. ದುಷ್ಟರು ನಕಲಿ ಖಾತೆ ಕ್ರಿಯೇಟ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ನಕಲಿ ಖಾತೆಯಲ್ಲಿ ಯಾರೇ ಸಹಾಯ ಕೇಳಿದರೂ ಹಣ ನೀಡದಂತೆ ಎಸ್ಪಿ ತಿಳಿಸಿದ್ದಾರೆ.

ಈ ಮೊದಲು ಜಿಲ್ಲೆಯ ಎಸ್ಪಿ ಆಗಿದ್ದ ಹನುಮಂತರಾಯ ಅವರ ಹೆಸರಿನಲ್ಲಿ ಸಹ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣ ನಡೆದಿತ್ತು. ಇದೀಗ ಜಿಲ್ಲೆಯ ನೂತನ ಎಸ್ಪಿ ರಿಷ್ಯಂತ್ ರವರ ಹೆಸರಿನಲ್ಲಿ ಸಹ ನಕಲಿ ಖಾತೆ ಸೃಷ್ಟಿಸಿದ್ದಾರೆ. ಇನ್ನಾದರೂ ದಾವಣಗೆರೆ ಜಿಲ್ಲಾ ಪೊಲೀಸರು ಇಂತಹ ಖದೀಮರನ್ನು ಮಟ್ಟಹಾಕಬೇಕಿದೆ.