ದಾವಣಗೆರೆ: ರಾಜಕೀಯ ಮುಖಂಡನೊಬ್ಬ ಇದ್ದಕ್ಕಿದ್ದಂತೆ ಸಮಾಜ ಸುಧಾರಕನ ಸಮಾಧಿಯನ್ನೇ ಧ್ವಂಸ ಮಾಡಿದ್ದಾರೆ. ವಿದೇಶದಲ್ಲಿ ವ್ಯಾಸಂಗ ಮಾಡಿ ಶೋಷಿತರ ಕಲ್ಯಾಣಕ್ಕೆ ಸಂಸ್ಥೆ ಸ್ಥಾಪನೆ ಮಾಡಿ ಶ್ರಮಿಸಿದ್ದ ಮಾಜಿ ಶಾಸಕ, ಜೊತೆಗೆ ಖ್ಯಾತ ನೇತ್ರ ತಜ್ಞರಾಗಿದ್ದ ಆ ವ್ಯಕ್ತಿಯ ಸಮಾಧಿ ನಾಶವಾಗಿದೆ. ತಂದೆಯ ಸಮಾಧಿ ಸ್ಥಿತಿ ನೋಡಿ ಪುತ್ರಿ ಲೇಖಕಿ ಜಾಹ್ನವಿ ಬಿಕ್ಕಿ ಬಿಕ್ಕಿ ಅಳುತ್ತಾ ಹೋರಾಟ ಆರಂಭಿಸಿದ್ದಾರೆ.
ಧ್ವಂಸ ಆಗಿರುವ ಸಮಾಧಿ ಭರಮಸಾಗರ ಕ್ಷೇತ್ರದ ಮಾಜಿ ಶಾಸಕ, ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ, ಆದಿ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಖ್ಯಾತ ನೇತ್ರ ತಜ್ಞ ಆಗಿದ್ದ ಡಾ.ಬಿ.ಎಂ.ತಿಪ್ಪೇಸ್ವಾಮೀ ಅವರದ್ದು, 1990 ರಲ್ಲಿ ಸಾವನ್ನಪ್ಪಿದ್ದಾಗ ಇದು ಅಂದಿನ ಅವರ ಭೂಮಿ ಆಗಿತ್ತು. ಇಂದಿನ ದಾವಣಗೆರೆ ಶಿವಕುಮಾರ ಸ್ವಾಮಿ ಬಡಾವಣೆಯ ಕೋಟಿ ಬೆಲೆ ಬಾಳುವ ಜಾಗದಲ್ಲಿ ಸಮಾಧಿ ಮಾಡಲಾಗಿತ್ತು. ಇದಲ್ಲದೇ ಇವರ ಪತ್ನಿ ಯಲ್ಲಮ್ಮ, ಪುತ್ರರಾದ ಮಲ್ಲಿಕಾರ್ಜುನ, ಡಾ.ಬಿ.ಟಿ.ಮೋಹನ್ ಹೀಗೆ ನಾಲ್ಕು ಜನರ ಸಮಾಧಿ ಇದೇ ಇಪ್ಪತ್ತು ಗುಂಟೆ ಜಾಗದಲ್ಲಿದೆ ಎಂಬುದು ಕುಟುಂಬಸ್ಥರ ಮಾತಾಗಿದೆ.
ಮೂಲಗಳ ಪ್ರಕಾರ ಇದು ಎರಡು ಎಕರೆ ಇಪ್ಪತ್ತು ಗುಂಟೆ ಜಾಗ ಇದೆ. ಇದು ಮಾಜಿ ಸಚಿವರಾದ ದಿವಂಗತ ಬಿ. ಬಸಲಿಂಗಪ್ಪ ಅವರು ಡಾ.ತಿಪ್ಪೇಸ್ವಾಮಿ ಹಿರಿಯ ಪುತ್ರ ಮಲ್ಲಿಕಾರ್ಜುನ ಹೆಸರಿಗೆ ನೀಡಿದ ಭೂಮಿಯಾಗಿದೆ. ಇದರಲ್ಲಿ ಒಂದಿಷ್ಟು ಜಮೀನು ಮಾರಾಟ ಕೂಡಾ ಮಾಡಲಾಗಿದೆ.
ಕಾಂಗ್ರೆಸ್ ಮುಖಂಡ ಗಣೇಶ್ ಹುಲ್ಲಮನೆ ಎಂಬುವರು ಸಮಾಧಿ ಇರುವ ಜಮೀನು ನಾವು ಖರೀದಿಸಿದ್ದೇವೆ ಎಂದು ಹೇಳಿ ಜೆಸಿಬಿಯಿಂದ ಸಮಾಧಿಯನ್ನು ದ್ವಂಸಗೊಳಿಸಿದ್ದಾರೆ ಎಂದು ಡಾ.ಬಿ.ಎಂ. ತಿಪ್ಪೇಸ್ವಾಮೀಯವರ ಪುತ್ರಿ ಬಿ.ಟಿ.ಜಾಹ್ನವಿ ಅವರು ಆರೋಪ ಮಾಡಿದ್ದು, ತಂದೆ ಸಮಾಧಿ ಉಳಿಸಲು ಹೋರಾಟ ಆರಂಭಿಸಿದ್ದಾರೆ. ಇದಲ್ಲದೇ ಇದಕ್ಕೆ ಡಾ. ತಿಪ್ಪೇರುದ್ರಸ್ವಾಮಿ ಅವರ ಸೊಸೆ ಪುಷ್ಪಲತಾ ಕೂಡ ಧ್ವನಿ ಗೂಡಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರಿಯಲ್ ಎಸ್ಟೇಟ್ ದಂಧೆಗಾಗಿ ಸಮಾಜ ಸುಧಾರಕನ ಸಮಾಧಿ ನಾಶ ಮಾಡಿದ್ದು ಕಾಂಗ್ರೆಸ್ ಮುಖಂಡ ಹುಲ್ಲಮನೆ ಗಣೇಶ್ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಯವರ ಸೊಸೆ ದೂರಿದ್ದಾರೆ.
ಇದನ್ನೂ ಓದಿ: ಮರಳು, ಕಲ್ಲು ಹಾಗೂ ರಿಯಲ್ ಎಸ್ಟೆಟ್ ವಿಚಾರಕ್ಕೆ ಪೊಲೀಸರು ಕೈ ಜೋಡಿಸಿದರೆ ಕಠಿಣ ಕ್ರಮ : ಆರಗ ಜ್ಞಾನೇಂದ್ರ