ದಾವಣಗೆರೆ: ಒಳಚರಂಡಿಗಳು ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿದ್ದು, ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದವು. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು. ಈ ಸಮಸ್ಯೆ ಕುರಿತು ಈಟಿವಿ ಭಾರತ ಜೂನ್ 14ರಂದು ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ದಾವಣಗೆರೆ ಮಹಾನಗರ ಪಾಲಿಕೆ ಬೀಳುವ ಹಂತದಲ್ಲಿದ್ದ ಯುಜಿಡಿ ಬಾಕ್ಸ್ಗಳ ಮರು ನಿರ್ಮಾಣಕ್ಕೆ ಚಾಲನೆ ನೀಡಿದೆ.
ಸ್ಮಾರ್ಟ್ ದಾವಣಗೆರೆಯಲ್ಲಿ ಬೀಳುವ ಹಂತದಲ್ಲಿವೆ ಹಲವು ಯುಜಿಡಿ ಬಾಕ್ಸ್ಗಳು!
ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ಸಾಗುತ್ತಿದೆ. ಇನ್ನು ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬಿದ್ದಿದ್ದರೂ ಪಾಲಿಕೆ ತಲೆಕೆಡಿಸಿಕೊಂಡಿರಲಿಲ್ಲ. ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದರು. ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದ ಹಳೆ ಕುಂದುವಾಡ, ವಿನೋಬನಗರ ಸೇರಿದಂತೆ ವಿವಿಧೆಡೆ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿತ್ತು. ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಇನ್ನು ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೋ ಎಂಬ ಆತಂಕದಲ್ಲಿ ಪೋಷಕರಿದ್ದರು.
ಈಟಿವಿ ಭಾರತ ಕಾಳಜಿ
ಮಹಾನಗರ ಪಾಲಿಕೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿತ್ತು. ಈಟಿವಿ ಭಾರತ ಈ ಬಗ್ಗೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ 15 ದಿನದಲ್ಲೇ ಯುಜಿಡಿ ಬಾಕ್ಸ್ ಮರು ನಿರ್ಮಾಣಕ್ಕೆ ಚಾಲನೆ ನೀಡಿದೆ. ಪಾಲಿಕೆ ವ್ಯಾಪ್ತಿಯ ಹಳೆ ಕುಂದುವಾಡದ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗ ಹಾಗೂ ನಗರದ 2-3 ಕಡೆಗಳಲ್ಲಿ ಯುಜಿಡಿ ಬಾಕ್ಸ್ ಸರಿಪಡಿಸಿದೆ.